Breaking
6 Nov 2026, Fri

ಮಜಿ ಶಾಲೆಯಲ್ಲಿ ಮಕ್ಕಳಿಗೆ ಜೇನು ಕೃಷಿ ಮಾಹಿತಿ

ಕಲ್ಲಡ್ಕ: ಶಿಕ್ಷಣವೆಂದರೆ ಕೇವಲ ನಾಲ್ಕು ಗೋಡೆಗಳ ನಡುವೆ ಪಠ್ಯಪುಸ್ತಕಗಳ ಮೂಲಕ ಪಡೆಯುವ ಜ್ಞಾನವಷ್ಟೇ ಅಲ್ಲ. ಪರಿಸರದೊಂದಿಗೆ ಬೆರೆತು, ಜೀವನದ ಅನುಭವಗಳ ಮೂಲಕ ಕಲಿಯುವುದೂ ಶಿಕ್ಷಣದ ಪ್ರಮುಖ ಭಾಗವಾಗಿದೆ. ಈ ನಿಟ್ಟಿನಲ್ಲಿ ವೀರಕಂಬ ಗ್ರಾಮದ ಮಜಿ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಜೇನು ಕೃಷಿಯ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು.

ಬಂಟ್ವಾಳ ತಾಲೂಕು ತೋಟಗಾರಿಕೆ ಇಲಾಖೆಯ ವತಿಯಿಂದ ನವೆಂಬರ್ 5ರಂದು ವೀರಕಂಬ ಗ್ರಾಮದ ಮಜಿ ಶಾಲೆಯಲ್ಲಿ ಜೇನು ಕೃಷಿಕರಿಗಾಗಿ ಆಯೋಜಿಸಲಾಗಿದ್ದ ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳನ್ನೂ ಪಾಲ್ಗೊಳ್ಳುವಂತೆ ಮಾಡಿ ಜೇನು ಕೃಷಿಯ ಬಗ್ಗೆ ಅರಿವು ಮೂಡಿಸಲಾಯಿತು.

ಶಾಲೆಯ ಹಳೆಯ ಕಟ್ಟಡದ ಕೊಠಡಿಯೊಂದರಲ್ಲಿ ಜೇನುನೊಣಗಳು ಗೂಡು ಕಟ್ಟಿದ್ದವು. ಇದನ್ನು ತೆರವುಗೊಳಿಸುವುದು ಶಿಕ್ಷಕರಿಗೆ ತಲೆನೋವಾಗಿ ಪರಿಣಮಿಸಿತ್ತು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಜೇನು ಕೃಷಿ ತರಬೇತಿ ಆಯೋಜನೆಯಾಗಿದ್ದು, ಜೇನು ಕೃಷಿ ತಜ್ಞರು ಗೂಡನ್ನು ತೆರವುಗೊಳಿಸುವ ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ಜೇನುನೊಣಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜೇನುನೊಣಗಳ ಜೀವನಕ್ರಮ, ಜೇನು ಕೃಷಿಯ ವಿಧಾನ, ಜೇನು ಪೆಟ್ಟಿಗೆಯ ನಿರ್ವಹಣೆ, ಜೇನು ಸಂಗ್ರಹಣೆಯ ಕ್ರಮ ಹಾಗೂ ಜೇನು ಕೃಷಿಯಿಂದ ದೊರೆಯುವ ಆರ್ಥಿಕ ಪ್ರಯೋಜನಗಳ ಕುರಿತು ತಜ್ಞರು ಮಾಹಿತಿ ನೀಡಿದರು.

ವಿದ್ಯಾರ್ಥಿಗಳು ಆಸಕ್ತಿಯಿಂದ ತರಬೇತಿಯಲ್ಲಿ ಪಾಲ್ಗೊಂಡು ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದರು. ಈ ಕಾರ್ಯಕ್ರಮವು ಮಕ್ಕಳಲ್ಲಿ ಪರಿಸರ ಸಂರಕ್ಷಣೆ, ಜೀವವೈವಿಧ್ಯದ ಮಹತ್ವ ಹಾಗೂ ಸ್ವಾವಲಂಬನೆಯ ಕುರಿತು ಅರಿವು ಮೂಡಿಸಲು ಸಹಕಾರಿಯಾಯಿತು.

ಕಾರ್ಯಕ್ರಮದಲ್ಲಿ ವೀರಕಂಬ ಗ್ರಾಮ ಆಡಳಿತಾಧಿಕಾರಿ ದಿನೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಶರ್ಮ, ಶಾಲಾ ಮುಖ್ಯ ಶಿಕ್ಷಕಿ ಬೆನೆಡಿಕ್ತ ಮಂಡೋನ್ಸಾ, ಹಿರಿಯ ಶಿಕ್ಷಕಿ ಸಂಗೀತ ಶರ್ಮ, ಜೇನು ಕೃಷಿ ಮಾಹಿತಿ ಸಂಪನ್ಮೂಲ ವ್ಯಕ್ತಿಗಳು, ಗ್ರಾಮ ವ್ಯಾಪ್ತಿಯ ಜೇನು ಕೃಷಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *