Breaking
6 Nov 2026, Fri

ಹಾಲು, ಬಸ್ ಪ್ರಯಾಣ ದರ ಏರಿಕೆಗೆ ಪ್ರಭಾಕರ ಪ್ರಭು ಖಂಡನೆ

ಬಂಟ್ವಾಳ: ಗ್ಯಾರಂಟಿ ಯೋಜನೆಗಳ ಆಮಿಷವೊಡ್ಡಿ ಬಡವರು ಹಾಗೂ ಮಧ್ಯಮ ವರ್ಗದವರನ್ನು ವಂಚಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ನೇತೃತ್ವದ ಕರ್ನಾಟಕ ರಾಜ್ಯ ಸರಕಾರ, ಮುಂಬಾಗಿಲಿನಿಂದ ಸ್ವಲ್ಪ ಹಣ ನೀಡಿ ಹಿಂಬಾಗಿಲಿನಿಂದ ಹೆಬ್ಬಾವಿನಂತೆ ಗ್ಯಾರಂಟಿ ಫಲಾನುಭವಿಗಳನ್ನು ನುಂಗುತ್ತಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಟೀಕಿಸಿದ್ದಾರೆ.

ಪ್ರತಿಯೊಂದು ವಿಚಾರಕ್ಕೂ ಕೇಂದ್ರ ಸರಕಾರವನ್ನು ದೂಷಿಸುವ ರಾಜ್ಯ ಸರಕಾರಕ್ಕೆ ನಿಜವಾಗಿಯೂ ಇಚ್ಛಾಶಕ್ತಿ ಇದ್ದರೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯ ತೆರಿಗೆಯನ್ನು ಕಡಿಮೆ ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರಕಾರ ಸ್ಟ್ಯಾಂಪ್ ಡ್ಯೂಟಿ, ನೋಂದಣಿ ಶುಲ್ಕ, ಆಸ್ತಿ ತೆರಿಗೆ, ವಿದ್ಯುತ್ ದರ, ಆರ್‌ಟಿಸಿ ದರ, ವಾಹನ ನೋಂದಣಿ ಶುಲ್ಕ ಹಾಗೂ ಗಣಿಗಾರಿಕೆ ರಾಜಧನವನ್ನು ಹೆಚ್ಚಿಸಿದೆ. ಇದೀಗ ಹಾಲು ಮತ್ತು ಹಾಲಿನ ಉತ್ಪನ್ನಗಳ ದರ ಏರಿಕೆ ಮಾಡಿರುವುದರಿಂದ ಪ್ರತಿಯೊಂದು ಕುಟುಂಬದ ಮೇಲೆ ಸರಾಸರಿ ₹750ರಿಂದ ₹1,000ರಷ್ಟು ಹೆಚ್ಚುವರಿ ಹೊರೆ ಬಿದ್ದಂತಾಗಿದೆ. ಇದು ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜ್ಯ ಸರಕಾರ ಜನರಿಗೆ ನೀಡಿದ ಕಹಿ ಉಡುಗೊರೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದರ ಬೆನ್ನಲ್ಲೇ ಪ್ರಯಾಣಿಕರ ಬಸ್ ಪ್ರಯಾಣ ದರವನ್ನೂ ಗಣನೀಯವಾಗಿ ಹೆಚ್ಚಿಸಲಾಗಿದೆ. ನಾಗರಿಕರು ಪಾವತಿಸುವ ತೆರಿಗೆ ಹಣದಿಂದ ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷರಿಗೆ ₹25,000 ಹಾಗೂ ಜಿಲ್ಲಾ ಅಧ್ಯಕ್ಷರಿಗೆ ₹50,000 ಗೌರವಧನ ನೀಡುತ್ತಿರುವುದು ಕೂಡ ಅಸಂಬದ್ಧ ಕ್ರಮವಾಗಿದೆ ಎಂದು ಪ್ರಭಾಕರ ಪ್ರಭು ಸರಕಾರದ ನೀತಿಯನ್ನು ಖಂಡಿಸಿದ್ದಾರೆ.

Leave a Reply

Your email address will not be published. Required fields are marked *