Breaking
6 Nov 2026, Fri

ನಾರಾಯಣ ನಾಯಕ್ ಅವರ ಶಿಕ್ಷಣ ಸೇವೆಗೆ ಬೆಲೆ ಕಟ್ಟಲಾಗದು: ಡಾ. ಗಿರೀಶ ಭಟ್

ಕರಾವಳಿ ಭಾಗದ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತಮ್ಮ ಇಳಿವಯಸ್ಸಿನಲ್ಲಿಯೂ ನಿರಂತರವಾಗಿ ನೆರವಿನ ಹಸ್ತ ಚಾಚುತ್ತಿರುವ ವಿಶ್ರಾಂತ ಮುಖ್ಯಶಿಕ್ಷಕ ನಾರಾಯಣ ನಾಯಕ್ ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಗಿರೀಶ ಭಟ್ ಅಭಿಪ್ರಾಯಪಟ್ಟಿದ್ದಾರೆ.

ಸಿದ್ಧಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಬಡ ವಿದ್ಯಾರ್ಥಿಗಳ ಶಿಕ್ಷಣ ವೆಚ್ಚಕ್ಕಾಗಿ ನಾರಾಯಣ ನಾಯಕ್ ಅವರು 50 ಸಾವಿರ ರೂಪಾಯಿಗಳ ದತ್ತಿನಿಧಿಯನ್ನು ಕೊಡುಗೆಯಾಗಿ ನೀಡಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ನಾರಾಯಣ ನಾಯಕ್ ಅವರು ತಮಗೆ ಲಭಿಸುವ ಪ್ರಶಸ್ತಿಗಳ ಮೊತ್ತಕ್ಕೆ ಸಮಾನವಾದ ಹಣವನ್ನು ತಮ್ಮ ಸ್ವಂತ ಉಳಿತಾಯದಿಂದ ಸೇರಿಸಿ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಬಡ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿದ್ದಾರೆ.

ಕಳೆದ ಒಂದು ತಿಂಗಳ ಅವಧಿಯಲ್ಲಿಯೇ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಸುಮಾರು ಎರಡು ಲಕ್ಷ ರೂಪಾಯಿಗಳ ನೆರವು ನೀಡಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಸರಕಾರಿ ಹಾಗೂ ಖಾಸಗಿ ವಿದ್ಯಾರ್ಥಿವೇತನಗಳನ್ನು ದೊರಕಿಸಿಕೊಡುವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ತಮ್ಮ ನಿವೃತ್ತಿವೇತನದ ಶೇಕಡಾ 60ಕ್ಕೂ ಅಧಿಕ ಮೊತ್ತವನ್ನು ಸಮಾಜಸೇವೆಗೆ ವಿನಿಯೋಗಿಸುತ್ತಿರುವುದು ಅವರ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿದೆ ಎಂದು ಡಾ. ಗಿರೀಶ ಭಟ್ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ದತ್ತಿನಿಧಿಯ 50 ಸಾವಿರ ರೂಪಾಯಿಗಳ ಚೆಕ್ ಅನ್ನು ವಿದ್ಯಾರ್ಥಿ ನಾಯಕ ಹರೀಶ್ ಅವರಿಗೆ ಹಸ್ತಾಂತರಿಸಿದ ನಾರಾಯಣ ನಾಯಕ್ ಅವರು, ಯುವಜನತೆಗೆ ಮಹತ್ವದ ಸಂದೇಶ ನೀಡಿದರು.

ಜೀವನದಲ್ಲಿ ಅನೇಕ ಸವಾಲುಗಳಿದ್ದರೂ ಶ್ರದ್ಧೆ ಮತ್ತು ನಿರಂತರ ಪ್ರಯತ್ನವಿದ್ದರೆ ಯಶಸ್ಸು ಸಾಧಿಸಲು ಸಾಧ್ಯ. ನಿರುದ್ಯೋಗ ಸಮಸ್ಯೆಗೆ ದುಡಿಮೆಯ ಮೇಲಿನ ಶ್ರದ್ಧೆಯೇ ಪರಿಹಾರ ಎಂದು ಅವರು ಹೇಳಿದರು.

ಇಂದು ನೆರವು ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸ್ವಂತ ಕಾಲ ಮೇಲೆ ನಿಂತ ಬಳಿಕ ತಾವು ಕೂಡ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ನೆರವಾಗುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *