ಬಂಟ್ವಾಳ: ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಜ್ಜಿಬೆಟ್ಟು ಗ್ರಾಮದ ಆಲದಪದವು ಎಂಬಲ್ಲಿ ನಿಸರ್ಗದತ್ತ ಜೀವನ ಮತ್ತು ಮೌಲ್ಯಾಧಾರಿತ ಶಿಕ್ಷಣದ ಉದ್ದೇಶ ಹೊಂದಿರುವ ‘ಪ್ರಕೃತಿ ಜ್ಞಾನಧಾಮ’ ಶೈಕ್ಷಣಿಕ ಸೇವಾ ಸಂಸ್ಥೆಯು ಗುರುವಾರ ಉದ್ಘಾಟನೆಗೊಂಡಿತು.

ಪೊಳಲಿ ಮಾದುಕೋಡಿ ಶ್ರೀ ಕೊರಗಜ್ಜ ಸಾನಿಧ್ಯದ ಆಡಳಿತ ಧರ್ಮದರ್ಶಿ ಹಾಗೂ ಶ್ರೀ ಸಾಯಿ ಹೀಲಿಂಗ್ ಸೆಂಟರ್‌ನ ಹಿರಿಯ ಗುರುಗಳಾದ ಶ್ರೀ ವಿಜಯ ಸುವರ್ಣ ಗುರೂಜಿಯವರು ದೀಪ ಬೆಳಗಿಸಿ, ಗಿಡ ನೆಡುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು. ಬಳಿಕ ಸಂಸ್ಥೆಯ ಸೇವಾ ವಿವರಗಳ ಕರಪತ್ರವನ್ನು ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಪಿಲಾತಬೆಟ್ಟು ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ. ತುಂಗಪ್ಪ ಬಂಗೇರ, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಕೆ. ರಮೇಶ ನಾಯಕ್ ರಾಯಿ, ಇರ್ವತ್ತೂರು ಪದವು ಶ್ರೀ ಶಾರದ ಸೇವಾ ಟ್ರಸ್ಟ್ ಅಧ್ಯಕ್ಷ ಡಾ. ರಾಮಕೃಷ್ಣ ಎಸ್., ಸಿರಿಗುಂಡದಪಾಡಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಮೋಹನ್ ಶೆಟ್ಟಿ ನರ್ವಲ್ದಡ್ಡ, ಯಕ್ಷಧ್ರುವ ಪಟ್ಲ ಫೌಂಡೇಶನ್ ಪುಂಜಾಲಕಟ್ಟೆ ಘಟಕದ ಅಧ್ಯಕ್ಷ ಟಿ. ಹರೀಂದ್ರ ಪೈ, ಶ್ರೀ ಶಾರದ ಸೇವಾ ಟ್ರಸ್ಟ್ ಉಪಾಧ್ಯಕ್ಷ ಶೇಖರ್ ಪೂಜಾರಿ ಅಗಲ್ದೋಡಿ, ಇರ್ವತ್ತೂರು ಪದವು ಶ್ರೀ ಶಾರದೋತ್ಸವ ಸೇವಾ ಸಮಿತಿ ಅಧ್ಯಕ್ಷ ಸುದೀಂದ್ರ ಶೆಟ್ಟಿ ಎರ್ಮೆನಾಡು, ವಾಮದಪದವು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚೇತನ್ ಕುಮಾರ್ ಕುದ್ಕಂದೋಡಿ ಹಾಗೂ ಪಾಂಗಲ್ಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಶಾಂತ್ ಕೋಟ್ಯಾನ್ ಮೇಗಿನಮನೆ ಮೊದಲಾದವರು ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಸಂಸ್ಥೆಯ ಪ್ರಧಾನ ಶಿಕ್ಷಕ ಗೋಪಾಲ ಅಂಚನ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು, ಯುವಜನರು ಹಾಗೂ ಆಸಕ್ತರಿಗೆ ನೈಸರ್ಗಿಕ ಜೀವನ ವಿಧಾನ, ಜೀವನ ಕೌಶಲ್ಯ, ಜೀವನ ಮೌಲ್ಯಗಳು, ಪರಿಸರ ಸಂರಕ್ಷಣೆ, ಡಿಜಿಟಲ್ ಡಿಟಾಕ್ಸ್, ಮಾನವೀಯ ಮೌಲ್ಯಗಳು ಮತ್ತು ಪ್ರಕೃತಿ ಪ್ರೀತಿ ಸೇರಿದಂತೆ 30ಕ್ಕೂ ಹೆಚ್ಚು ವಿಷಯಗಳಲ್ಲಿ ಅನುಭವಿ ಶಿಕ್ಷಕರ ಮೂಲಕ ಶಿಕ್ಷಣ ನೀಡುವ ಸದುದ್ದೇಶವನ್ನು ಸಂಸ್ಥೆ ಹೊಂದಿದೆ ಎಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತರಾದ ಸುಪ್ರೀತ್ ಜೈನ್ ಇರ್ವತ್ತೂರು ಬೀಡು, ಚಂದ್ರಶೇಖರ ಆಚಾರ್ಯ ಹಲೆಪ್ಪಾಡಿ, ದೀಪಕ್ ಮಾದುಕೋಡಿ, ರೋಹಿಣಿ, ಓಬಯ್ಯ ಬಂಗೇರಾ ದಂಪತಿ, ಸುಗಂಧಿ, ನೃತ್ಯ ಶಿಕ್ಷಕಿ ಪ್ರತಿಮ ಗೋಪಾಲ ಅಂಚನ್, ಯಕ್ಷ್ ಹಾಗೂ ಯೆತ್ವಿಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ವಿಜಯ ಸುವರ್ಣ ಗುರೂಜಿಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.




