Breaking
5 Nov 2026, Thu

ಮಂಗಳೂರಿನಲ್ಲಿ LSD ಡ್ರಗ್ಸ್ ಮಾರಾಟ ಜಾಲ ಪತ್ತೆ: ಇಬ್ಬರ ಬಂಧನ – ₹3.35 ಲಕ್ಷ ಮೌಲ್ಯದ ಮಾದಕವಸ್ತು, ಮೊಬೈಲ್ ವಶ

ಮಂಗಳೂರು: ನಗರದಲ್ಲಿ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ನಿಷೇಧಿತ ಮಾದಕವಸ್ತು LSD (Lysergic Acid Diethylamide) ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನಿಂದ LSD ಸ್ಟ್ರಿಪ್ಗಳನ್ನು ತಂದು ಮಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ನವೆಂಬರ್ 3ರಂದು ಮಧ್ಯಾಹ್ನ ಪಡೀಲ್ ರೈಲ್ವೆ ಬ್ರಿಡ್ಜ್ ಬಳಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಿ, ಸುಮಾರು 3 ಲಕ್ಷ ರೂ. ಮೌಲ್ಯದ 100 LSD ಡ್ರಗ್ಸ್ ಸ್ಟ್ರಿಪ್ಗಳು ಹಾಗೂ ಮೂರು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 3,35,000 ರೂ. ಎಂದು ಅಂದಾಜಿಸಲಾಗಿದೆ.


ಬಂಧಿತರನ್ನು ಅಳಪೆ ಪಡೀಲ್ನ ತುಂಬೆ ನಿವಾಸಿ ನಿಹಾಲ್ ಸ್ಯಾಂಪ್ರೆಸ್ ರೋಡ್ರಿಗಸ್ (30) ಹಾಗೂ ಉರ್ವಸ್ಟೋರ್ ದಡ್ಡಲ್ಕಾಡ್ನ ಎಮಿಲಾಯ್ ಮ್ಯಾನ್ಷನ್ ಅಪಾರ್ಟ್ಮೆಂಟ್ ನಿವಾಸಿ ಸಿದ್ದಾರ್ಥ ಶೆಟ್ಟಿ (35) ಎಂದು ಗುರುತಿಸಲಾಗಿದೆ.
ಮೊದಲ ಆರೋಪಿ ನಿಹಾಲ್ ವಿರುದ್ಧ ಈ ಹಿಂದೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಮಾದಕವಸ್ತು ಮಾರಾಟಕ್ಕೆ ಸಂಬಂಧಿಸಿದ ಪ್ರಕರಣ ದಾಖಲಾಗಿದೆ. ಎರಡನೇ ಆರೋಪಿ ಸಿದ್ದಾರ್ಥ ಶೆಟ್ಟಿ ವಿರುದ್ಧ ಮಂಗಳೂರಿನ ಬರ್ಕೆ ಮತ್ತು ಉರ್ವ ಪೊಲೀಸ್ ಠಾಣೆಗಳಲ್ಲಿ ಗಲಾಟೆ, ಕೊಲೆಯತ್ನ ಹಾಗೂ ಗಾಂಜಾ ಮಾರಾಟ ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.


ಈ ಮಾದಕವಸ್ತು ಮಾರಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆಯಿದ್ದು, ಅವರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾದಕವಸ್ತು ಮಾರಾಟ ಹಾಗೂ ಸಾಗಾಟ ಜಾಲದ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *