Breaking
6 Nov 2026, Fri

ಮಂಗಳೂರು: ಶಾಲಾ ಟ್ಯಾಕ್ಸಿಗೆ ಕಂಟೇನರ್ ಲಾರಿ ಡಿಕ್ಕಿ – ನಾಲ್ವರು ವಿಶೇಷ ಚೇತನ ಮಕ್ಕಳು ಸೇರಿ ಆರು ಮಂದಿ ಪಾರು!

ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಅದೃಷ್ಟವಶಾತ್, ಶಾಲಾ ಟ್ಯಾಕ್ಸಿಯಲ್ಲಿದ್ದ ನಾಲ್ವರು ವಿಶೇಷ ಚೇತನ ಮಕ್ಕಳು ಸೇರಿದಂತೆ ಆರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಂಗಳೂರಿನ ಹಳೆಯಂಗಡಿಯ ಪಾವಂಜೆ ಜಂಕ್ಷನ್ ಬಳಿ ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಹಳೆಯಂಗಡಿಯಿಂದ ಸುರತ್ಕಲ್ ಕಡೆಗೆ ನಾಲ್ವರು ವಿಶೇಷ ಚೇತನ ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಟ್ಯಾಕ್ಸಿಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದಿದೆ.

ಪಾವಂಜೆ ಜಂಕ್ಷನ್ ಬಳಿ ಅಳವಡಿಸಲಾಗಿದ್ದ ಬ್ಯಾರಿಕೇಡ್ ಸಮೀಪ ಟ್ಯಾಕ್ಸಿ ಚಾಲಕ ಕಂಟೇನರ್ ಲಾರಿಯನ್ನು ಎಡಭಾಗದಿಂದ ಹಿಂದಿಕ್ಕಲು ಪ್ರಯತ್ನಿಸಿದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಟ್ಯಾಕ್ಸಿಯ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಟ್ಯಾಕ್ಸಿಯಲ್ಲಿದ್ದ ನಾಲ್ವರು ಮಕ್ಕಳು, ಶಿಕ್ಷಕಿ ಹಾಗೂ ಚಾಲಕ ಸೇರಿದಂತೆ ಆರು ಮಂದಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ.

ಘಟನೆಯಿಂದಾಗಿ ಕೆಲಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಧಾವಿಸಿದ ಸ್ಥಳೀಯ ಆಟೋ ಚಾಲಕರು ಹಾಗೂ ಮಂಗಳೂರು ಉತ್ತರ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದರು. ಬಳಿಕ ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Leave a Reply

Your email address will not be published. Required fields are marked *