ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಮಹಾಬಲೇಶ್ವರ ಟಿ. ಹೆಬ್ಬಾರ್ ಅವರಿಗೆ ದೀಪಿಕಾ ಪ್ರೌಢಶಾಲೆ, ಮೊಡಂಕಾಪು ವತಿಯಿಂದ ಶಾಲೆಯ ಸಭಾಂಗಣದಲ್ಲಿ ಗೌರವಾಭಿವಂದನಾ ಕಾರ್ಯಕ್ರಮ ನಡೆಯಿತು.
ಮೊಡಂಕಾಪು ಚರ್ಚ್‌ನ ವಂದನೀಯ ವಿಕ್ಟರ್ ಡಿಸೋಜಾ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಾಬಲೇಶ್ವರ ಹೆಬ್ಬಾರ್ ಅವರ ಸರಳ ವ್ಯಕ್ತಿತ್ವ ಹಾಗೂ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಅವರು ಸಲ್ಲಿಸಿದ ಅಮೂಲ್ಯ ಸೇವೆಯನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಿದರು.

ಬಿ.ಸಿ.ರೋಡ್‌ನ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಸ್ಥಾಪಕ ಡಾ. ತುಕಾರಾಮ ಪೂಜಾರಿ ಅಭಿನಂದನಾ ಭಾಷಣ ಮಾಡಿದರು. ಕನ್ನಡ ನಾಡು, ನುಡಿ ಹಾಗೂ ಭಾಷೆಯ ಬೆಳವಣಿಗೆಗೆ ಹೆಬ್ಬಾರ್ ಅವರ ಕೊಡುಗೆ ಅಪಾರವಾಗಿದೆ. ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ಸೇವೆ ಸಲ್ಲಿಸಿರುವ ಅವರು, ನಾಟಕ ಕಲಾವಿದರಾಗಿಯೂ ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಅಭಿರುಚಿ ಜೋಡುಮಾರ್ಗ ತಂಡವನ್ನು ಸ್ಥಾಪಿಸಿ ಬೆಳೆಸುವ ಮೂಲಕ ಕಲಾ ಕ್ಷೇತ್ರಕ್ಕೂ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.

ಗೌರವ ಅತಿಥಿಗಳಾಗಿ ರಾಕೇಶ್ ಮಲ್ಲಿ, ಅಶ್ವನಿ ಕುಮಾರ್ ರೈ, ಮಹಮ್ಮದ್ ವಳವೂರು, ಸುನಿಲ್ ಲೂಯಿಸ್, ಜೋನ್ ಗೊಮ್ಸ್ ಹಾಗೂ ಹೆಚ್.ಎನ್. ಹೆಬ್ಬಾರ್ ಉಪಸ್ಥಿತರಿದ್ದರು.
ಶಿವಪ್ರಸಾದ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಹಿರಿಯ ವಿದ್ಯಾರ್ಥಿಗಳು ಮಹಾಬಲೇಶ್ವರ ಹೆಬ್ಬಾರ್ ಅವರಿಗೆ ಗೌರವಾಭಿವಂದನೆ ಸಲ್ಲಿಸಿದರು. ಮುಖ್ಯ ಶಿಕ್ಷಕ ಸಾಧು ಸ್ವಾಗತಿಸಿದರು. ಹಿರಿಯ ಶಿಕ್ಷಕ ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಪ್ರಫುಲ್ಲ ಸಲ್ದಾನ ವಂದಿಸಿದರು.



