Breaking
6 Nov 2026, Fri

ಪಣಂಬೂರಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನ: 3.8 ಕೆ.ಜಿ ಗಾಂಜಾ ಸಹಿತ ಪುತ್ತೂರಿನ ಯುವಕ ಅರೆಸ್ಟ್

ಮಂಗಳೂರು: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಪಣಂಬೂರು ಪೊಲೀಸರು, 3 ಕೆ.ಜಿ. 800 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಪುತ್ತೂರು ತಾಲೂಕು ಪಡ್ನೂರು ಪೋಸ್ಟ್, ಪಡ್ಡಾಯೂರು ಹೌಸ್ನ ಮೊಹಮ್ಮದ್ ನಿಸಾರ್ (23) ಎಂದು ಗುರುತಿಸಲಾಗಿದೆ.


ನ. 5ರಂದು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಜೋಕಟ್ಟೆ ಕ್ರಾಸ್ ರೈಲ್ವೆ ಬ್ರಿಡ್ಜ್ ಸಮೀಪ ಗಾಂಜಾ ಮಾರಾಟ ಮಾಡಲು ತಂದಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಉಪವಿಭಾಗದ ಎಸಿಪಿ ಅವರ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಪಣಂಬೂರು ಪೊಲೀಸ್ ಠಾಣೆಯ ಅಧಿಕಾರಿ, ಸಿಬ್ಬಂದಿ ಜಂಟಿಯಾಗಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.


ಆರೋಪಿಯಿಂದ ಅಂದಾಜು 1.90 ಲಕ್ಷ ರೂ. ಮೌಲ್ಯದ 3 ಕೆ.ಜಿ. 800 ಗ್ರಾಂ ಗಾಂಜಾ, 4 ಸಾವಿರ ರೂ. ಮೌಲ್ಯದ ಒಂದು ಮೊಬೈಲ್ ಫೋನ್ ಹಾಗೂ ಗಾಂಜಾ ಸಾಗಾಟಕ್ಕೆ ಬಳಸಿದ್ದ ಕೆಎಲ್ 14 1662 ನೋಂದಣಿ ಸಂಖ್ಯೆಯ ಅಂದಾಜು 2 ಲಕ್ಷ ರೂ. ಮೌಲ್ಯದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.


ಆರೋಪಿಯು ಸುರತ್ಕಲ್, ಪಣಂಬೂರು, ಕಾವೂರು ಸೇರಿದಂತೆ ಮಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದನೆಂದು ತನಿಖೆಯಿಂದ ತಿಳಿದುಬಂದಿದೆ. ಈ ಹಿಂದೆ ಕೂಡ ಹಲವು ಬಾರಿ ಮಂಗಳೂರು ನಗರದಲ್ಲಿ ಗಾಂಜಾ ಮಾರಾಟ ಮಾಡಿರುವುದಾಗಿ ಆರೋಪಿ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ವಶಪಡಿಸಿಕೊಂಡ ಗಾಂಜಾ, ಮೊಬೈಲ್ ಹಾಗೂ ಕಾರಿನ ಒಟ್ಟು ಅಂದಾಜು ಮೌಲ್ಯ 3,94,000 ರೂ. ಆಗಿದೆ. ಈ ಸಂಬಂಧ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 137/2026ರಂತೆ ಎನ್ಡಿಪಿಎಸ್ ಕಾಯ್ದೆಯ ಕಲಂ 8(C), 20(b)(ii)(A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *