ಉಳ್ಳಾಲ: ಚಾಲಕನಿಗೆ ಏಕಾಏಕಿ ರಕ್ತದೊತ್ತಡ ಕಡಿಮೆಯಾದ ಪರಿಣಾಮ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಹಣ್ಣಿನ ಅಂಗಡಿಗೆ ನುಗ್ಗಿದ ಘಟನೆ ನ.7ರ ಶನಿವಾರ ದೇರಳಕಟ್ಟೆ ಮಸೀದಿ ಎದುರಿನ ಚತುಷ್ಪಥ ರಸ್ತೆಯಲ್ಲಿ ನಡೆದಿದೆ. ಬೆಳಗಿನ ಸಮಯವಾಗಿದ್ದರೂ ಅಂಗಡಿಯಲ್ಲಿ ಗ್ರಾಹಕರು ಇಲ್ಲದ ಕಾರಣ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಮಂಗಳೂರು ಕಡೆಯಿಂದ ನಾಟೆಕಲ್ ಕಡೆಗೆ ಸಂಚರಿಸುತ್ತಿದ್ದ ಕಾರಿನ ಚಾಲಕನಿಗೆ ಏಕಾಏಕಿ ರಕ್ತದೊತ್ತಡ ಕಡಿಮೆಯಾಗಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ವಾಹನಗಳಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಕಾರನ್ನು ಎಡಭಾಗಕ್ಕೆ ತಿರುಗಿಸಿದ್ದು, ನಿಯಂತ್ರಣ ತಪ್ಪಿದ ಕಾರು ನೇರವಾಗಿ ರಸ್ತೆ ಬದಿಯ ಹಣ್ಣಿನ ಅಂಗಡಿಗೆ ಡಿಕ್ಕಿ ಹೊಡೆದಿದೆ.

ಘಟನೆ ನಡೆದ ಸಂದರ್ಭದಲ್ಲಿ ಅಂಗಡಿ ಮಾಲಕ ಅಂಗಡಿ ತೆರೆದು ಹಣ್ಣುಗಳನ್ನು ಹೊರಗಡೆ ಜೋಡಿಸುತ್ತಿದ್ದರು. ಬೆಳಗಿನ ಸಮಯವಾದ್ದರಿಂದ ಗ್ರಾಹಕರು ಅಂಗಡಿಯಲ್ಲಿ ಇರಲಿಲ್ಲ. ಪರಿಣಾಮವಾಗಿ ಅಂಗಡಿ ಮಾಲಕ ಹಾಗೂ ಕಾರು ಚಾಲಕ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಆದರೆ ಡಿಕ್ಕಿಯ ರಭಸಕ್ಕೆ ಅಂಗಡಿಯಲ್ಲಿದ್ದ ವಸ್ತುಗಳಿಗೆ ಹಾನಿಯಾಗಿದೆ.

ಈ ರಸ್ತೆ ಮೂಲಕ ಬೆಳಗಿನ ಹೊತ್ತು ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಘಟನೆ ನಡೆದ ಸಮಯದಲ್ಲಿ ವಿದ್ಯಾರ್ಥಿಗಳು ಅಥವಾ ಸಾರ್ವಜನಿಕರು ಸ್ಥಳದಲ್ಲಿ ಇಲ್ಲದಿದ್ದರಿಂದ ಸಂಭವಿಸಬಹುದಾಗಿದ್ದ ಮತ್ತೊಂದು ದುರಂತ ತಪ್ಪಿದಂತಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಕಾರನ್ನು ತೆರವುಗೊಳಿಸುವ ಕಾರ್ಯದಲ್ಲಿ ಸಹಕರಿಸಿದರು. ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.



