ಕಕ್ಯಪದವು: ಬಂಟ್ವಾಳ ತಾಲೂಕು ಮಟ್ಟದ 14ರ ವಯೋಮಾನದ ಬಾಲಕ-ಬಾಲಕಿಯರ ಥ್ರೋಬಾಲ್ ಪಂದ್ಯಾಟದಲ್ಲಿ ಕಕ್ಯಪದವಿನ ಎಲ್.ಸಿ.ಆರ್. ಇಂಡಿಯನ್ ಸ್ಕೂಲ್ನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಅನಂತಾಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನ.6ರಂದು ನಡೆದ ಪಂದ್ಯಾಟದಲ್ಲಿ ಎಲ್.ಸಿ.ಆರ್. ಶಾಲೆಯ ಪ್ರಾಥಮಿಕ ವಿಭಾಗದ ಬಾಲಕರ ಹಾಗೂ ಬಾಲಕಿಯರ ತಂಡಗಳು ದ್ವಿತೀಯ ಸ್ಥಾನ ಪಡೆದು ಶಾಲೆಗೆ ಕೀರ್ತಿ ತಂದಿವೆ.

ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಬಾಲಕಿಯರ ವಿಭಾಗದಿಂದ 8ನೇ ತರಗತಿಯ ರೋಶ್ನಿ, ವಿಭಾ ಹಾಗೂ ನಿರೀಕ್ಷಾ ಮತ್ತು ಬಾಲಕರ ವಿಭಾಗದಿಂದ 7ನೇ ತರಗತಿಯ ಸ್ವರಾಜ್, ನೀತನ್ ಹಾಗೂ 8ನೇ ತರಗತಿಯ ರವೀಶ್ ಜಿಲ್ಲಾ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.
ವೈಯಕ್ತಿಕ ವಿಭಾಗದಲ್ಲಿ 7ನೇ ತರಗತಿಯ ಸ್ವರಾಜ್ ಅತ್ಯುತ್ತಮ ರಿಸೀವರ್ (Best Receiver) ಪ್ರಶಸ್ತಿ ಹಾಗೂ 8ನೇ ತರಗತಿಯ ರೋಶ್ನಿ ಅತ್ಯುತ್ತಮ ಸರ್ವರ್ (Best Server) ಪ್ರಶಸ್ತಿ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರು, ಮುಖ್ಯ ಶಿಕ್ಷಕಿ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿ, ಮುಂದಿನ ಹಂತದ ಪಂದ್ಯಾಟದಲ್ಲೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.
ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಹರಿಣಾಕ್ಷಿ ಜಿ.ಕೆ. ಹಾಗೂ ಪೃಥ್ವಿರಾಜ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.



