ಮಂಗಳೂರು: ನಗರದ ವಾಮಂಜೂರು ಸಮೀಪದ ತಿರುವೈಲು ಶಾಲೆಯ ಬಳಿಯ ಕೆತ್ತಿಕಲ್ ಗುಡ್ಡದಲ್ಲಿ ಮಂಗಳವಾರ ಮತ್ತೆ ಭೂಕುಸಿತ ಸಂಭವಿಸಿದ್ದು, ಭಾರೀ ಪ್ರಮಾಣದ ಮಣ್ಣು ಹಾಗೂ ಬಂಡೆಕಲ್ಲುಗಳು ರಾಷ್ಟ್ರೀಯ ಹೆದ್ದಾರಿಗೆ ಉರುಳಿವೆ.

ಕೆಲವು ದಿನಗಳ ಹಿಂದೆಯೇ ಇದೇ ಸ್ಥಳದಲ್ಲಿ ಗುಡ್ಡ ಕುಸಿದು ಮಣ್ಣು ಹೆದ್ದಾರಿಗೆ ಬಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಏಕಮುಖ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕಳೆದ ಎರಡು ದಿನಗಳಿಂದ ಸುರಿದ ನಿರಂತರ ಮಳೆಯ ಪರಿಣಾಮ ಮಂಗಳವಾರ ಮಧ್ಯಾಹ್ನ ಮತ್ತೆ ಭಾರೀ ಪ್ರಮಾಣದಲ್ಲಿ ಮಣ್ಣು ಮತ್ತು ಬಂಡೆಗಳು ಕುಸಿದಿವೆ.

ಪ್ರಸ್ತುತ ಗುಡ್ಡದ ಮೇಲ್ಭಾಗದಲ್ಲಿ ಇನ್ನೂ ಬಿರುಕುಗಳು ಕಾಣಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಪರಿಸ್ಥಿತಿಯನ್ನು ಅಧಿಕಾರಿಗಳು ನಿಗಾ ವಹಿಸಿದ್ದು, ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ.

ಕಳೆದ ವರ್ಷವೂ ಭಾರೀ ಮಳೆಯ ವೇಳೆ ಕೆತ್ತಿಕಲ್ ಪ್ರದೇಶದ ಹಲವು ಭಾಗಗಳಲ್ಲಿ ಭೂಕುಸಿತ ಉಂಟಾಗಿತ್ತು. ಆ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ಗುಡ್ಡ ಅಗೆದಿರುವ ಪ್ರದೇಶಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚಿಸಿತ್ತು.

ಆದರೆ ತಿರುವೈಲು ಶಾಲೆಯ ಸಮೀಪ ಅಗತ್ಯ ಮುನ್ನೆಚ್ಚರಿಕಾ ಕಾಮಗಾರಿಗಳನ್ನು ಸಮರ್ಪಕವಾಗಿ ಕೈಗೊಳ್ಳದ ಕಾರಣ ಮತ್ತೆ ಭೂಕುಸಿತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ನಿರಂತರವಾಗಿ ಗುಡ್ಡವನ್ನು ಅವೈಜ್ಞಾನಿಕವಾಗಿ ಅಗೆದಿರುವುದೇ ಈ ದುರ್ಘಟನೆಗಳಿಗೆ ಕಾರಣವಾಗಿದ್ದು, ಗುಡ್ಡದ ಮೇಲ್ಭಾಗದಲ್ಲಿರುವ ಮನೆಗಳ ನಿವಾಸಿಗಳೂ ಅಪಾಯದ ಭೀತಿಯಲ್ಲಿ ದಿನ ಕಳೆಯುತ್ತಿದ್ದಾರೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.



