ಮಂಗಳೂರು: ನಗರದ ಖಾಸಗಿ ಕಾಲೇಜೊಂದರ ಪ್ರಥಮ ವರ್ಷದ ಇಬ್ಬರು ವಿದ್ಯಾರ್ಥಿಗಳ ಮೇಲೆ ಅದೇ ಕಾಲೇಜಿನ ದ್ವಿತೀಯ ವರ್ಷದ 4ರಿಂದ 6 ಮಂದಿ ವಿದ್ಯಾರ್ಥಿಗಳು ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

ಗುಜ್ಜರಕೆರೆ ಸಮೀಪದ ಚಹಾ ಅಂಗಡಿ ಬಳಿ ಘಟನೆ ನಡೆದಿದ್ದು, ಗಾಯಗೊಂಡ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಇದು ರ‍್ಯಾಗಿಂಗ್ ಪ್ರಕರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪ್ರಕರಣದ ಕುರಿತು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿ, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಲ್ಲೆಗೆ ನಿಖರ ಕಾರಣವೇನು ಹಾಗೂ ರ‍್ಯಾಗಿಂಗ್‌ಗೆ ಸಂಬಂಧಿಸಿದ ಪ್ರಕರಣವೇ ಎಂಬುದು ತನಿಖೆ ಪೂರ್ಣಗೊಂಡ ಬಳಿಕ ಸ್ಪಷ್ಟವಾಗಲಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.


