ಮಂಗಳೂರು: 2019ರಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸುಮಾರು ಏಳು ವರ್ಷಗಳ ಬಳಿಕ ಮಂಗಳೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಮುಂಬೈನ ಅಂಧೇರಿ ವೆಸ್ಟ್ ನಿವಾಸಿ ಅಶೋಕ್ ನಾರಾಯಣ್ (63) ಎಂದು ಗುರುತಿಸಲಾಗಿದೆ.

ಪ್ರಕರಣ ದಾಖಲಾಗಿದ ಬಳಿಕ ಆರೋಪಿ ಬಂಧನದಿಂದ ತಪ್ಪಿಸಿಕೊಳ್ಳುವುದರ ಜೊತೆಗೆ ನ್ಯಾಯಾಲಯಕ್ಕೂ ಹಾಜರಾಗದೆ ವಿಳಾಸ ಬದಲಾಯಿಸಿಕೊಂಡು ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ತಲೆಮರೆಸಿಕೊಂಡಿರುವ ಆರೋಪಪಟ್ಟಿ ಸಲ್ಲಿಸಲಾಗಿತ್ತು.

ತನಿಖೆಯ ವೇಳೆ ಆರೋಪಿ ವಿದೇಶದಲ್ಲಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಪಾಸ್‌ಪೋರ್ಟ್ ವಿವರಗಳನ್ನು ಸಂಗ್ರಹಿಸಿ ಪೊಲೀಸ್ ಆಯುಕ್ತರ ಕಚೇರಿ ಮೂಲಕ ಲುಕ್ ಔಟ್ ಸರ್ಕ್ಯುಲರ್ (LOC) ಜಾರಿಗೊಳಿಸಲಾಗಿತ್ತು.

ಆಗಸ್ಟ್ 1ರಂದು ಆರೋಪಿ ವಿದೇಶದಿಂದ ಭಾರತಕ್ಕೆ ಮರಳಿದ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಆತನನ್ನು ಬಂಧಿಸಿದರು. ಬಳಿಕ ಆಗಸ್ಟ್ 2ರಂದು ಕಂಕನಾಡಿ ನಗರ ಠಾಣೆಯ ಎಎಸ್‌ಐ ಜಗದೀಶ್ ಹಾಗೂ ಸಿಬ್ಬಂದಿ ರವಿಕುಮಾರ್ ಆರೋಪಿಯನ್ನು ವಶಕ್ಕೆ ಪಡೆದು ಮಂಗಳೂರಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.






