Breaking
24 Oct 2026, Sat

ಮುಲ್ಕಿ: ಟೂರಿಸ್ಟ್ ವಾಹನ ಡಿಕ್ಕಿ ಹೊಡೆದು ಕಮರಿಗೆ ಉರುಳಿದ ಶಾಲಾ ಬಸ್; ಇಬ್ಬರು ಮಕ್ಕಳು ಗಂಭೀರ

ಮುಲ್ಕಿ: ಟೂರಿಸ್ಟ್ ವಾಹನವೊಂದು ಶಾಲಾ ಬಸ್ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಬಸ್ ರಸ್ತೆ ಬದಿಯ ಕಮರಿಗೆ ಉರುಳಿದ ಘಟನೆ ಮುಲ್ಕಿ ಸಮೀಪದ ಕೊಲ್ನಾಡು ಗುತ್ತು ಬಳಿ ಶುಕ್ರವಾರ ಸಂಜೆ ನಡೆದಿದೆ. ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಬಸ್ ಚಾಲಕ ಸೇರಿದಂತೆ ಇಬ್ಬರು ಚಾಲಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ.


ಮಂಗಳೂರಿನ ಕುಳಾಯಿ ಮೂಲದ ಖಾಸಗಿ ಶಾಲೆಗೆ ಸೇರಿದ ಬಸ್ ಕೊಲ್ನಾಡುವಿನಲ್ಲಿ ಯು-ಟರ್ನ್ ತೆಗೆದುಕೊಂಡು ವಿದ್ಯಾರ್ಥಿನಿಯೊಬ್ಬರನ್ನು ಇಳಿಸಿ ಮುಂದಕ್ಕೆ ಚಲಿಸುತ್ತಿದ್ದ ವೇಳೆ, ಹಿಂಬದಿಯಿಂದ ಅತಿವೇಗವಾಗಿ ಬಂದ ತಮಿಳುನಾಡು ಮೂಲದ ಟೂರಿಸ್ಟ್ ವಾಹನವೊಂದು ಬಸ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್ ರಸ್ತೆ ಬದಿಯ ಕಮರಿಗೆ ಉರುಳಿದೆ.


ಬಸ್ನಲ್ಲಿ ಒಟ್ಟು 17 ವಿದ್ಯಾರ್ಥಿಗಳಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಡಿಕ್ಕಿಯ ತೀವ್ರತೆಗೆ ಬಸ್ ನಜ್ಜುಗುಜ್ಜಾಗಿದೆ. ಟೂರಿಸ್ಟ್ ವಾಹನದ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *