ಬಂದಾರು: ಜೈ ಶ್ರೀರಾಮ್ ಗೆಳೆಯರ ಬಳಗ, ಶ್ರೀರಾಮನಗರ, ಬಂದಾರು ಇದರ ಹೆಮ್ಮೆಯ ಸದಸ್ಯ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸುತ್ತಿರುವ ಯುವ ಸಾಹಿತಿ ಚಂದ್ರಹಾಸ ಕುಂಬಾರ ಬಂದಾರು ಅವರ ದ್ವಿತೀಯ ಕೃತಿ ‘ಸ್ವಾತಿಮುತ್ತು’ ಚುಟುಕುಗಳ ಸಂಕಲನ ಅ. 22ರಂದು ಮಾಣಿಲ ಕ್ಷೇತ್ರದಲ್ಲಿ ಬಿಡುಗಡೆಯಾಯಿತು.

ಮಾಣಿಲ ಕ್ಷೇತ್ರದ ಶ್ರೀ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿ ಅವರು ತಮ್ಮ ದಿವ್ಯಹಸ್ತದಿಂದ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಅಲ್ಪ ವಯಸ್ಸಿನಲ್ಲೇ ಸಾಹಿತ್ಯ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಚಂದ್ರಹಾಸ ಕುಂಬಾರ ಅವರ ಈ ಕೃತಿ ಸಾಹಿತ್ಯಾಸಕ್ತರಲ್ಲಿ ನಿರೀಕ್ಷೆ ಮೂಡಿಸಿದೆ.


‘ಸ್ವಾತಿಮುತ್ತು’ ಕೃತಿಗೆ ‘ತುಲುನಾಡ ಕಂಚಿದ ಸ್ವರಬಿರ್ಸೆ’ ಎಂಬ ಬಿರುದಾಂಕಿತ ಎಚ್.ಕೆ. ನಯನಾಡು ಅವರು ಮುನ್ನುಡಿ ಬರೆದಿದ್ದಾರೆ. ಸಾಹಿತಿ ಶ್ಯಾಮ್ ಪ್ರಸಾದ್ ಭಟ್ ಉಡುಪಿ ಅವರು ಬೆನ್ನುಡಿ ಬರೆದಿದ್ದು, ಕೃತಿಯ ಮುಖಪುಟವನ್ನು ಸಾಹಿತಿ ಪದ್ಮನಾಭ ಪೂಜಾರಿ ಬಂಟ್ವಾಳ ಅವರು ವಿನ್ಯಾಸಗೊಳಿಸಿದ್ದಾರೆ. ಉಜಿರೆಯ ಮಂಜುಶ್ರೀ ಪ್ರಿಂಟರ್ಸ್ನಲ್ಲಿ ದೀಕ್ಷಿತ್ ಎರ್ಮಾಳ ಅವರು ಕೃತಿಯನ್ನು ಮುದ್ರಿಸಿದ್ದಾರೆ.
ಕೃತಿ ಬಿಡುಗಡೆ ಸಮಾರಂಭದಲ್ಲಿ ನಾಡೋಜ ಮಹೇಶ್ ಜೋಶಿ, ಎಚ್.ಕೆ. ನಯನಾಡು, ವಕೀಲ ಉದಯ್ ಕುಮಾರ್ ಬಿ.ಕೆ. ಹಾಗೂ ಜೈ ಶ್ರೀರಾಮ್ ಗೆಳೆಯರ ಬಳಗದ ಅಧ್ಯಕ್ಷ ಶ್ರೀಧರ್ ಬಿ.ಕೆ. ಉಪಸ್ಥಿತರಿದ್ದರು.



