Breaking
23 Oct 2026, Fri

ಮಂಗಳೂರಿನಲ್ಲಿ ‘ಕಾರ್ಮೆಲ್ ಪ್ರೇರಣ್ 2027’ ಬೈಬಲ್ ದಿನಚರಿ ಬಿಡುಗಡೆ

ಮಂಗಳೂರು: ಕಾರ್ಮೆಲೈಟ್ ಧರ್ಮಗುರುಗಳ ಧ್ಯಾನವನ ಪ್ರಕಾಶನ ಹೊರತಂದಿರುವ ಕೊಂಕಣಿ ಭಾಷೆಯ ಬೈಬಲ್ ದಿನಚರಿ ‘ಕಾರ್ಮೆಲ್ ಪ್ರೇರಣ್ 2027’ರ 11ನೇ ಆವೃತ್ತಿಯನ್ನು ಅ. 22ರಂದು ಬಿಕರ್ನಕಟ್ಟೆಯ ಶಿಶು ಯೇಸು ಪುಣ್ಯಕ್ಷೇತ್ರದಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಮೆಲೈಟ್ ಧರ್ಮಸಭೆಯ ಧರ್ಮಗುರು ರೆ. ಫಾ. ರಯನ್ ಪಿಂಟೊ, ಒಸಿಡಿ ಅವರು ದಿನಚರಿಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಂತ ಜೋಸೆಫ್ ಮಠದ ಮುಖ್ಯಸ್ಥ ರೆ. ಫಾ. ಮೆಲ್ವಿನ್ ಡಿಕುನ್ಹಾ ಹಾಗೂ ರೆ. ಫಾ. ಸ್ಟ್ಯಾನಿ ಲಿಸ್ಟನ್ ಪಿಂಟೊ, ಒಸಿಡಿ ಉಪಸ್ಥಿತರಿದ್ದರು.


ದಿನಚರಿಯ ಪರಿಚಯ ಮಾಡಿಕೊಟ್ಟ ಶಿಶು ಯೇಸು ಪುಣ್ಯಕ್ಷೇತ್ರದ ನಿರ್ದೇಶಕ ರೆ. ಫಾ. ಸ್ಟಿಫನ್ ಪಿರೇರಾ, ಒಸಿಡಿ ಅವರು, ದೈನಂದಿನ ಬೈಬಲ್ ವಾಚನ, ಆಧ್ಯಾತ್ಮಿಕ ಚಿಂತನೆಗಳು, ಸಂತರ ಜೀವನ ಚರಿತ್ರೆಗಳು ಹಾಗೂ ಪ್ರಾರ್ಥನೆಗಳನ್ನು ಒಳಗೊಂಡಿರುವ ಈ ದಿನಚರಿಯು ಭಕ್ತರ ಆಧ್ಯಾತ್ಮಿಕ ಜೀವನವನ್ನು ಪೋಷಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದರು.


ಮಕ್ಕಳ ಶಿಕ್ಷಣಕ್ಕೆ ನೆರವು
‘ಕಾರ್ಮೆಲ್ ಪ್ರೇರಣ್’ ಪ್ರಕಟಣೆಯು ಕೇವಲ ಆಧ್ಯಾತ್ಮಿಕ ಮಾರ್ಗದರ್ಶಿಯಾಗಿರದೆ, ದೃಷ್ಟಿದೋಷ ಹೊಂದಿರುವ ಪೋಷಕರ ಸುಮಾರು 100 ಮಕ್ಕಳ ಶಿಕ್ಷಣಕ್ಕೆ ನೆರವು ನೀಡುವ ‘ವಿಷನ್ ಫಾರ್ ಫ್ಯೂಚರ್’ ಕಾರ್ಯಕ್ರಮಕ್ಕೂ ಬೆಂಬಲ ನೀಡುತ್ತಿದೆ ಎಂದು ಫಾ. ಸ್ಟಿಫನ್ ಪಿರೇರಾ ತಿಳಿಸಿದರು. ಓದುಗರು ಹಾಗೂ ಹಿತೈಷಿಗಳ ಪ್ರೋತ್ಸಾಹ ಮತ್ತು ಉದಾರ ನೆರವು ಈ ಮಕ್ಕಳ ಶೈಕ್ಷಣಿಕ ಕನಸುಗಳನ್ನು ನನಸಾಗಿಸಲು ಸಹಕಾರಿಯಾಗಿದೆ ಎಂದರು.
ಕಾರ್ಮೆಲೈಟ್ ಧರ್ಮಗುರುಗಳ ನಿರ್ವಹಣೆಯಲ್ಲಿರುವ ಧ್ಯಾನವನ ಪ್ರಕಾಶನವು ಇಂಗ್ಲಿಷ್ನಲ್ಲಿ ‘ಕಾರ್ಮೆಲ್ ಲೈಟ್’ ಹಾಗೂ ಕನ್ನಡದಲ್ಲಿ ‘ಕಾರ್ಮೆಲ್ ಧ್ಯಾನ’ ಎಂಬ ಹೆಸರಿನಲ್ಲಿಯೂ ಇದೇ ಮಾದರಿಯ ಬೈಬಲ್ ದಿನಚರಿಗಳನ್ನು ಪ್ರಕಟಿಸುತ್ತಿದೆ.

Leave a Reply

Your email address will not be published. Required fields are marked *