ಮಂಗಳೂರು: ಬೋಳಿಯಾರ್ ಪೆಟ್ರೋಲ್ ಪಂಪ್ ಬಳಿ ದ್ವಿಚಕ್ರ ವಾಹನಕ್ಕೆ ಪಿಕಪ್ ವಾಹನದಿಂದ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆಸಿ ಇಬ್ಬರು ಯುವಕರ ಸಾವಿಗೆ ಕಾರಣವಾದ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಪಿಕಪ್ ಚಾಲಕ ಹಫೀಝ್ ಅಲಿಯಾಸ್ ಅಪ್ಪಿ ಬಂಧಿತ ಆರೋಪಿ ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಉಳ್ಳಾಲ ತಾಲೂಕಿನ ಕಿನ್ಯಾ ಗ್ರಾಮದ ಇಸ್ಮಾಯಿಲ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿತ್ತು.
ಅಕ್ಟೋಬರ್ 19ರಂದು ಸಂಜೆ ಸ್ಕೂಟರ್ನಲ್ಲಿ ತೆರಳುತ್ತಿದ್ದ ಜುನೈದ್ ಮತ್ತು ಅರ್ಫಾಝ್ ಹಾಗೂ ಪಿಕಪ್ ಚಾಲಕ ಹಫೀಝ್ ನಡುವೆ ಮೊಬೈಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆದಿತ್ತು. ಈ ಹಿಂದೆ ಕೂಡ ಯುವಕರೊಂದಿಗೆ ವೈಷಮ್ಯ ಹೊಂದಿದ್ದ ಹಫೀಝ್, ಜಗಳದ ಬಳಿಕ ಸಿಟ್ಟಿನಿಂದ ಅವರ ವಿರುದ್ಧ ದ್ವೇಷ ಸಾಧಿಸಲು ಮುಂದಾಗಿದ್ದ ಎನ್ನಲಾಗಿದೆ.

ಮಾತಿನ ಗಲಾಟೆಯ ನಂತರ ಜುನೈದ್ ಮತ್ತು ಅರ್ಫಾಝ್ ಸ್ಕೂಟರ್ನಲ್ಲಿ ಮುಡಿಪು ಕಡೆಗೆ ತೆರಳುತ್ತಿದ್ದಾಗ, ಹಫೀಝ್ ತನ್ನ ಪಿಕಪ್ ವಾಹನದಲ್ಲಿ ಅವರನ್ನು ಹಿಂಬಾಲಿಸಿದ್ದಾನೆ. ಬಳಿಕ ಬೋಳಿಯಾರ್ ಪೆಟ್ರೋಲ್ ಪಂಪ್ ಬಳಿ ಸ್ಕೂಟರ್ಗೆ ಹಿಂದಿನಿಂದ ಅತಿವೇಗವಾಗಿ ಡಿಕ್ಕಿ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಕ್ಕಿಯ ರಭಸಕ್ಕೆ ಸ್ಕೂಟರ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಪರಿಣಾಮ ರಸ್ತೆಗೆ ಎಸೆಯಲ್ಪಟ್ಟ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿ ಪಿಕಪ್ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದನು.

ಘಟನೆ ನಡೆದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ತೀವ್ರ ಹುಡುಕಾಟ ನಡೆಸಿ ಹಫೀಝ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ, ಸ್ನೇಹಿತನ ಮೊಬೈಲ್ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ಹಾಗೂ ಹಿಂದಿನ ವೈಷಮ್ಯದಿಂದ ಉಂಟಾದ ಆಕ್ರೋಶದಲ್ಲಿ ಬೊಲೆರೊ ಪಿಕಪ್ ವಾಹನವನ್ನು ಯುವಕರ ಸ್ಕೂಟರ್ಗೆ ಡಿಕ್ಕಿ ಹೊಡೆಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.


