ಮಂಗಳೂರು: ಕಳೆದ 26 ವರ್ಷಗಳಿಂದ ಸಾಹಿತ್ಯ, ಸಂಸ್ಕೃತಿ, ಕಲೆ, ಸಂಘಟನೆ ಹಾಗೂ ಸದ್ವಿಚಾರಗಳ ನೆಲೆಯಲ್ಲಿ ಪುಸ್ತಕ ಪ್ರಕಟಣೆಗಳ ಮೂಲಕ ಸಕ್ರಿಯವಾಗಿರುವ ಮಂಗಳೂರಿನ ಕಲ್ಲಚ್ಚು ಪ್ರಕಾಶನದ 2026ನೇ ಸಾಲಿನ ವಾರ್ಷಿಕ ಕಲ್ಲಚ್ಚು ಪ್ರಶಸ್ತಿಗೆ ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕ ಉಮ್ಮತ್ತೂರು ರೇವಣ್ಣ ಆಯ್ಕೆಯಾಗಿದ್ದಾರೆ.

ಜನಪದ ಮತ್ತು ವಚನ ಪರಂಪರೆಯ ಕುರಿತು ಆಳವಾದ ಅಧ್ಯಯನ ನಡೆಸಿರುವ ರೇವಣ್ಣ ಅವರಿಗೆ ಕಲ್ಲಚ್ಚು ಪ್ರಕಾಶನದ 17ನೇ ಆವೃತ್ತಿಯ ವಾರ್ಷಿಕ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 14ರಂದು ಶನಿವಾರ ನಡೆಯಲಿದೆ.

ಮೂಲತಃ ಕರ್ನಾಟಕದ ಚಾಮರಾಜನಗರ ಜಿಲ್ಲೆಯವರಾದ ಉಮ್ಮತ್ತೂರು ರೇವಣ್ಣ ಅವರು ಪ್ರಸ್ತುತ ಸಿಂಗಾಪುರದಲ್ಲಿ ನೆಲೆಸಿದ್ದಾರೆ. ಅಲ್ಲಿನ ಕನ್ನಡ ಸಂಘದ ಚಟುವಟಿಕೆಗಳ ಜತೆಗೆ ಕನ್ನಡ ವಾಹಿನಿ, ಅಂತರ್ಜಾಲ ಹಾಗೂ ನಾಟಕ ಕ್ಷೇತ್ರಗಳಲ್ಲಿಯೂ ಸಕ್ರಿಯರಾಗಿದ್ದಾರೆ. ತಮ್ಮ ಸೌಮ್ಯ, ವಿಶಿಷ್ಟ ಹಾಗೂ ಪ್ರಬುದ್ಧ ಮಾತುಗಾರಿಕೆಯ ಮೂಲಕ ಜನಪ್ರಿಯರಾಗಿದ್ದಾರೆ.
ಈ ಕುರಿತು ಕಲ್ಲಚ್ಚು ಪ್ರಕಾಶನದ ವ್ಯವಸ್ಥಾಪಕ ಮುಖ್ಯಸ್ಥ, ಸಾಹಿತಿ ಹಾಗೂ ಪ್ರಕಾಶಕ ಮಹೇಶ್ ಆರ್. ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





