ಮೂಲ್ಕಿ: ಮನೆ ಬಾಗಿಲು ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಿನಡ್ಕ ಸಮೀಪದ ಕವತ್ತಾರು ಪ್ರದೇಶದಲ್ಲಿ ಜುಲೈ 11ರಂದು ನಡೆದಿದೆ.

ಪಂಜಿನಡ್ಕ–ಕವತ್ತಾರು ಮುಖ್ಯರಸ್ತೆಯಲ್ಲಿರುವ ಶ್ರೀ ಭ್ರಾಮರಿ ನಿವಾಸದ ಬಾಲಕೃಷ್ಣ ಶೆಟ್ಟಿಗಾರ್ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯಲ್ಲಿ ಬಾಲಕೃಷ್ಣ ಶೆಟ್ಟಿಗಾರ್, ಅವರ ಪತ್ನಿ ನಳಿನಾಕ್ಷಿ ಶೆಟ್ಟಿಗಾರ್ ಹಾಗೂ ಇತ್ತೀಚೆಗಷ್ಟೆ ಮದುವೆಯಾದ ಮಗ ಸುಶೀಲ್ ಮತ್ತು ಅವರ ಪತ್ನಿ ವಾಸಿಸುತ್ತಿದ್ದರು. ಶನಿವಾರ ಬೆಳಗ್ಗೆ ಬಾಲಕೃಷ್ಣ ಶೆಟ್ಟಿಗಾರ್, ಮಗ ಹಾಗೂ ಸೊಸೆ ಕೆಲಸಕ್ಕೆ ತೆರಳಿದ್ದು, ಬಾಲಕೃಷ್ಣ ಶೆಟ್ಟಿಗಾರ್ ಅವರ ಪತ್ನಿ ನಳಿನಾಕ್ಷಿ ಶೆಟ್ಟಿಗಾರ್ ಕಾಪುವಿನ ಮಾರಿಗುಡಿ ದೇವಸ್ಥಾನಕ್ಕೆ ಬೆಳಗ್ಗೆ ಹೋಗಿ ವಾಪಸ್ ಬರುವಾಗ ಮನೆಯಲ್ಲಿ ಕಳ್ಳತನ ನಡೆದಿದೆ ಎನ್ನಲಾಗಿದೆ.

ಕಳ್ಳರು ಮನೆಯ ಹಿಂಬಾಗಿಲು ಒಡೆದು ಒಳ ಪ್ರವೇಶಿಸಿ ಕವಾಟು ಹಾಗೂ ಡ್ರಾವರ್ ಜಾಲಾಡಿ ಬೆಡ್‌ರೂಮ್ ಕವಾಟಿನಲ್ಲಿ ಇರಿಸಿದ್ದ ಬೀಗದ ಕೈ ಬಳಸಿ ಕವಾಟು ತೆರೆದು ಅದರಲ್ಲಿದ್ದ 5 ಚಿನ್ನದ ಉಂಗುರಗಳು, ಒಂದು ಬ್ರೇಸ್‌ಲೆಟ್ ಹಾಗೂ ಒಂದು ಚಿನ್ನದ ಸರ ಕಳವು ಮಾಡಿದ್ದಾರೆ. ಕಳ್ಳರು ಮತ್ತೊಂದು ಬೆಡ್‌ರೂಮ್‌ಗೂ ಹೊಕ್ಕಿ ಅಲ್ಲಿದ್ದ ಕವಾಟವನ್ನೂ ಜಾಲಾಡಿ ಒಟ್ಟು ಸುಮಾರು 21 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ.

ಈ ಕುರಿತು ನಳಿನಾಕ್ಷಿ ಶೆಟ್ಟಿಗಾರ್ ಮೂಲ್ಕಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ತನಿಖೆ ಆರಂಭಿಸಿದ್ದಾರೆ.



