ಮಂಗಳೂರು: ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಹೊಸ ಮೈಲಿಗಲ್ಲಾಗಿರುವ “Mangalore IAS – A School for Civil Services” ಸಂಸ್ಥೆಯ ಉದ್ಘಾಟನಾ ಸಮಾರಂಭ ಭಾನುವಾರ ಬೆಳಗ್ಗೆ ಮಂಗಳೂರಿನ ಸಂದೇಶ ಫೌಂಡೇಶನ್ ಆವರಣದಲ್ಲಿ ನಡೆಯಿತು.

ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಸಂದೇಶ ಫೌಂಡೇಶನ್ ಅಧ್ಯಕ್ಷರಾದ ಅತೀ ವಂದನೀಯ ಡಾ. ಹೆನ್ರಿ ಡಿಸೋಜಾ ಅವರು ರಿಬ್ಬನ್ ಕತ್ತರಿಸುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿ ಆಶೀರ್ವದಿಸಿದರು. ಬಳಿಕ ರಾಮಕೃಷ್ಣ ಮಠದ ಸ್ವಾಮಿ ಯುಗಾನಂದ ಅವರು ದೀಪ ಪ್ರಜ್ವಲನೆ ನೆರವೇರಿಸಿ ಆಶೀರ್ವಚನ ನೀಡಿದರು.


ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಹೆನ್ರಿ ಡಿಸೋಜಾ, “ನಾವು ಎಲ್ಲಿ ಹುಟ್ಟಿದ್ದೇವೆ ಎನ್ನುವುದಕ್ಕಿಂತ, ಜೀವನದಲ್ಲಿ ಯಾವ ಗುರಿ ತಲುಪುತ್ತೇವೆ ಹಾಗೂ ಏನು ಸಾಧಿಸುತ್ತೇವೆ ಎನ್ನುವುದು ಮುಖ್ಯ” ಎಂದು ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸ್ವಾಮಿ ಯುಗಾನಂದ, ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣ, ಬ್ಯಾಂಕಿಂಗ್, ವಾಣಿಜ್ಯ ಹಾಗೂ ವೈದ್ಯಕೀಯ ಕ್ಷೇತ್ರಗಳಲ್ಲಿ ದೇಶಕ್ಕೆ ಮಾದರಿಯಾಗಿದ್ದರೂ, ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮರ್ಪಿತ ತರಬೇತಿ ಕೇಂದ್ರಗಳ ಕೊರತೆ ಇತ್ತು. ಈಗ ಅಂತಹ ಸಂಸ್ಥೆಯೊಂದು ಆರಂಭವಾಗಿರುವುದು ವಿದ್ಯಾರ್ಥಿಗಳಿಗೆ ದೊಡ್ಡ ಅವಕಾಶವಾಗಲಿದೆ ಎಂದು ಹೇಳಿದರು.

ಡೈಜಿ ವರ್ಲ್ಡ್ ನಿರ್ದೇಶಕ ವಾಲ್ಟರ್ ನಂದಳಿಕೆ ಮಾತನಾಡಿ, ತಮಗೂ ಪೊಲೀಸ್ ಇಲಾಖೆಗೆ ಸೇರುವ ಆಸೆ ಇತ್ತಾದರೂ ಸೂಕ್ತ ಮಾರ್ಗದರ್ಶನ ದೊರೆಯಲಿಲ್ಲ. ಈಗ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ಹಾಗೂ ಮಾಹಿತಿ ಲಭ್ಯವಾಗುತ್ತಿರುವುದು ಸಂತಸದ ವಿಚಾರ. ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಸಂದೇಶ ಫೌಂಡೇಶನ್ ನಿರ್ದೇಶಕ ವಂದನೀಯ ರೋಷನ್ ರೋಸಾರಿಯೋ ಸ್ವಾಗತಿಸಿದರು. Mangalore IAS ಸಂಸ್ಥೆಯ ಸಂಸ್ಥಾಪಕ ಸಂತೋಷ್ ರಾವ್ ಸಂಸ್ಥೆಯ ಉದ್ದೇಶ, ತರಬೇತಿ ವಿಧಾನ ಹಾಗೂ ವಿವಿಧ ಕೋರ್ಸ್‌ಗಳ ಕುರಿತು ಮಾಹಿತಿ ನೀಡಿದರು.

ಸಂದೇಶ ಸಂಸ್ಥೆಯ ಟ್ರಸ್ಟಿ ರೊಯ್ ಕ್ಯಾಸ್ಟಲಿನೋ ಧನ್ಯವಾದ ಸಲ್ಲಿಸಿದರು. ಜಾಸ್ಮಿನ್ ಜೇನಿಫರ್ ಕಾರ್ಯಕ್ರಮ ನಿರೂಪಿಸಿದ್ದು, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.



