Breaking
13 Jul 2026, Mon

ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ವೈಶಿಷ್ಟ್ಯಪೂರ್ಣ ವೈದ್ಯರ ದಿನಾಚರಣೆ

ಮಂಗಳೂರು: ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ನಗರದ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ವೈಶಿಷ್ಟ್ಯಪೂರ್ಣ ಹಾಗೂ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿ, ಸುಮಾರು 20 ಹಿರಿಯ ವೈದ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸರಕಾರಿ ಲೇಡಿಗೋಷನ್ ಆಸ್ಪತ್ರೆ ಹಾಗೂ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯ (ಕೆ.ಎಂ.ಸಿ.) ಕಳೆದ ಸುಮಾರು 70 ವರ್ಷಗಳಿಂದ ಪರಸ್ಪರ ಸಹಯೋಗದೊಂದಿಗೆ ಸಾರ್ವಜನಿಕರಿಗೆ, ವಿಶೇಷವಾಗಿ ತಾಯಿ ಮತ್ತು ಮಗುವಿನ ಆರೋಗ್ಯ ಸೇವೆಯನ್ನು ನೀಡುತ್ತಿದ್ದು, ಈ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಸನ್ಮಾನ ಸ್ವೀಕರಿಸಿದ ಕೆ.ಎಂ.ಸಿ. ಡೀನ್ ಡಾ. ಬಿ. ಉನ್ನಿಕೃಷ್ಣನ್ ಮಾತನಾಡಿ, ಇದು ತಮ್ಮ ಜೀವನದ ಅತ್ಯಂತ ಸ್ಮರಣೀಯ ಕ್ಷಣಗಳಲ್ಲಿ ಒಂದಾಗಿದ್ದು, ಕೆ.ಎಂ.ಸಿ. ವೈದ್ಯರ ಸೇವೆಯನ್ನು ಗುರುತಿಸಿ ಗೌರವಿಸಿದ ಲೇಡಿಗೋಷನ್ ಆಸ್ಪತ್ರೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಿರಿಯ ತಜ್ಞರಾದ ಡಾ. ಆರ್.ಎಲ್. ಕಾಮತ್, ಡಾ. ಎಸ್.ಆರ್. ನಾಯಕ್, ಡಾ. ಅಶ್ಫಾಕ್, ಡಾ. ಸುರೇಶ್ ಶೆಟ್ಟಿ, ಡಾ. ಶ್ರದ್ಧಾ ಶೆಟ್ಟಿ, ಡಾ. ಪ್ರಿಯಾ ಬಲ್ಲಾಳ್, ಡಾ. ಅನುಪಮಾ ಸುರೇಶ್, ಡಾ. ನಿಖಿಲ್ ಶೆಟ್ಟಿ, ಡಾ. ಭಾರತಿ ರಾವ್, ಡಾ. ಸಂತೋಷ್ ರೈ, ಡಾ. ರಂಜನ್, ಡಾ. ಸುಮೇಶ್ ರಾವ್, ಡಾ. ನೂತನ್ ಕಾಮತ್, ಡಾ. ಸುಚೇತಾ ರಾವ್, ಡಾ. ಪುಂಡಲೀಕ ಬಾಳಿಗಾ, ಡಾ. ಶ್ರದ್ಧಾ ಪೂಜಾರಿ, ಡಾ. ಜಗದೀಶ್, ಡಾ. ದಯಾನಂದ್ ಹಾಗೂ ಡಾ. ಸದಾನಂದ ಪೂಜಾರಿ ಸೇರಿದಂತೆ ಹಲವು ಹಿರಿಯ ವೈದ್ಯರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಯಾಗಿದ್ದ ಹಿರಿಯ ಮೂತ್ರರೋಗ ತಜ್ಞ ಡಾ. ಸದಾನಂದ ಪೂಜಾರಿ ಮಾತನಾಡಿ, ವೈದ್ಯರು ಮತ್ತು ರೋಗಿಗಳ ನಡುವಿನ ವಿಶ್ವಾಸ ಹಾಗೂ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಂತ್ಯದಲ್ಲಿ ಆಸ್ಪತ್ರೆಯ ಸಿಬ್ಬಂದಿ ವರ್ಗವು ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರನ್ನು ಸನ್ಮಾನಿಸಿ ಅಭಿನಂದಿಸಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಅವರು, ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಸರಕಾರಿ ಆಸ್ಪತ್ರೆ ಹಾಗೂ ಕೆ.ಎಂ.ಸಿ. ವೈದ್ಯರ ಅಪಾರ ಸೇವೆ ಅನನ್ಯವಾಗಿದೆ. ಕಳೆದ ಐದು ವರ್ಷಗಳಲ್ಲಿ ತಾಯಿ ಮರಣ ಪ್ರಮಾಣವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಲ್ಲಿ ಇಂದು ಸನ್ಮಾನಿತಗೊಂಡ ಹಿರಿಯ ವೈದ್ಯರ ಸೇವೆ ಮಹತ್ತರವಾಗಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಸೀಮಾ ಸ್ವಾಗತಿಸಿದರು. ಅಂಬಿಕಾ ಪ್ರಸ್ತಾವನೆಗೈದರೆ, ಶ್ರೀಮತಿ ಸವಿತಾ ಶುಭಾಶಯ ಕೋರಿದರು. ಶ್ರೀಮತಿ ಜ್ಯೋತಿ ಪ್ರಭಾ ಹಾಗೂ ಶ್ರೀಮತಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಲವಿನಾ ವಂದಿಸಿದರು.

Leave a Reply

Your email address will not be published. Required fields are marked *