Breaking
11 Jul 2026, Sat

ಪೂಜೆ ಫಲಿಸಿಲ್ಲ ಎಂದು ಬಾಬಾನ ಅಪಹರಿಸಿ, ₹4.25 ಲಕ್ಷ ಸುಲಿಗೆ: ನಾಲ್ವರು ಆರೋಪಿಗಳ ಬಂಧನ

ಬೆಂಗಳೂರು: ಶಾಂತಿ ಪೂಜೆ ಮಾಡಿಸುವ ನೆಪದಲ್ಲಿ ಬಾಬಾನೊಬ್ಬರನ್ನು ಅಪಹರಿಸಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ₹4.25 ಲಕ್ಷ ಸುಲಿಗೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ತುಮಕೂರು ಮೂಲದ ಆರಿಫ್, ಆದಿಲ್, ಚಿಕ್ಕಬಾಣಾವರದ ಇಮ್ರಾನ್ ಹಾಗೂ ಆರ್.ಟಿ. ನಗರದ ಖದೀರ್ ಎಂದು ಗುರುತಿಸಲಾಗಿದೆ. ಯಲಹಂಕ ನಿವಾಸಿ ಬಾಬಾ ಮೊಹಮ್ಮದ್ ತಾರಿಕ್ ಹುಸೇನ್ ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಆರಿಫ್ ಕೆಲ ದಿನಗಳ ಹಿಂದೆ ತಾರಿಕ್ ಅವರನ್ನು ಸಂಪರ್ಕಿಸಿ, ತಮ್ಮ ಮನೆಯಲ್ಲಿ ಶಾಂತಿ ಪೂಜೆ ನಡೆಸುವಂತೆ ಕೋರಿದ್ದ. ಮುಂಗಡವಾಗಿ ₹10 ಸಾವಿರವನ್ನು ಆನ್‌ಲೈನ್ ಮೂಲಕ ಪಾವತಿಸಿದ್ದ. ಆದರೆ ಕೆಲಸದ ಒತ್ತಡದಿಂದ ತಾರಿಕ್ ಮೂರು ದಿನಗಳ ಕಾಲ ಭೇಟಿ ನೀಡಿರಲಿಲ್ಲ.

ಜೂನ್ 29ರಂದು ಬಾಬಾರನ್ನು ಕರೆತರಲು ಕಾರು ಕಳುಹಿಸುವುದಾಗಿ ಹೇಳಿದ್ದ ಆರೋಪಿ, ಕಾರ್‌ ಬಂದಾಗಲೂ ತಾರಿಕ್‌ ಹೋಗಿರಲಿಲ್ಲ. ಬಳಿಕ ತನ್ನ ಸಹಚರರೊಂದಿಗೆ ಬಲವಂತವಾಗಿ ಕಾರಿನಲ್ಲಿ ಕೂರಿಸಿ ಅಪಹರಿಸಿ ತುಮಕೂರು ಹೊರವಲಯಕ್ಕೆ ಕರೆದೊಯ್ದಿದ್ದಾನೆ.

ಅಲ್ಲಿ ಆದಿಲ್, ಹಿಂದೆ ಮಾಡಿಸಿದ್ದ ಶಾಂತಿ ಪೂಜೆಯಿಂದ ಯಾವುದೇ ಪ್ರಯೋಜನವಾಗಿಲ್ಲ. ನೀಡಿದ ಹಣವನ್ನು ಹಿಂತಿರುಗಿಸು ಎಂದು ಒತ್ತಾಯಿಸಿದ್ದ. ಹಣ ನೀಡಲು ನಿರಾಕರಿಸಿದ ತಾರಿಕ್ ಮೇಲೆ ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.

ಬಳಿಕ ಬಾಬಾದ ಮೊಬೈಲ್ ಪಾಸ್‌ವರ್ಡ್ ಹಾಗೂ ಯುಪಿಐ ಪಿನ್ ಪಡೆದು, ಬ್ಯಾಂಕ್ ಖಾತೆಯಲ್ಲಿದ್ದ 5 ಲಕ್ಷ ರೂ.ಗೂ ಹೆಚ್ಚಿನ ಹಣವನ್ನು ಗಮನಿಸಿದ್ದರು. ಆರಿಫ್ ತನ್ನ ಖಾತೆಗೆ ₹13 ಸಾವಿರ ವರ್ಗಾಯಿಸಿಕೊಂಡಿದ್ದಾನೆ. ನಂತರ ನಿರ್ಜನ ಪ್ರದೇಶದಲ್ಲಿ ರಾತ್ರಿ ಪೂರ್ತಿ ಇರಿಸಿ, ಮರುದಿನ ಖಾಸಗಿ ಬ್ಯಾಂಕ್‌ಗೆ ಕರೆದುಕೊಂಡು ಹೋಗಿ ಬಾಬಾರಿಂದಲೇ ₹4.25 ಲಕ್ಷ ನಗದು ಡ್ರಾ ಮಾಡಿಸಿಕೊಂಡಿದ್ದಾರೆ.

ಸುಲಿಗೆ ಮಾಡಿದ ಬಳಿಕ ದಾಬಸ್‌ಪೇಟೆ ಮಾರ್ಗವಾಗಿ ದೊಡ್ಡಬಳ್ಳಾಪುರ ಹೊರವಲಯಕ್ಕೆ ಕರೆದುಕೊಂಡು ಹೋಗಿ, ಮಾರ್ಗಮಧ್ಯೆ ಬಾಬಾರನ್ನು ಇಳಿಸಿ, ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿ ಮೊಬೈಲ್ ನೀಡಿ ಆರೋಪಿಗಳು ಪರಾರಿಯಾಗಿದ್ದರು.

ಈ ಸಂಬಂಧ ತಾರಿಕ್ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *