ಕುದುರೆಮುಖ: ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಹಿತ್ತಿಲಪೇಲ ಪ್ರದೇಶದಲ್ಲಿ ಕಳೆದ ವರ್ಷ ಜೂನ್ 15ರಂದು ದ್ವಿಚಕ್ರ ವಾಹನ ಸಮೇತ ನದಿಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಘಟನೆ ನಡೆದಿದ್ದ ಸ್ಥಳದಲ್ಲೇ ಇದೀಗ ನದಿ ತುಂಬಿ ಹರಿಯುತ್ತಿದೆ, ನದಿ ದಾಟುವುದು ನಿಷೇಧಿಸಲಾಗಿದೆ ಎಂಬ ಬ್ಯಾನರ್ ಅಳವಡಿಸಿ, ಮೂಲನಿವಾಸಿಗಳ ಸಂಚಾರಕ್ಕೆ ಪರೋಕ್ಷವಾಗಿ ದಿಗ್ಬಂಧನ ವಿಧಿಸಿರುವ ಕ್ರಮವನ್ನು ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆ ಕೈಗೊಂಡಿವೆ.

ಸವಣಾಲು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲದಲ್ಲಿ 9 ಮಲೆಕುಡಿಯ ಆದಿವಾಸಿ ಕುಟುಂಬಗಳು ಸುಮಾರು ಎರಡು ಶತಮಾನಗಳಿಂದ ವಾಸಿಸುತ್ತಿದ್ದು, ಕೃಷಿಯನ್ನೇ ಜೀವನಾಧಾರವಾಗಿಸಿಕೊಂಡಿವೆ. ಆದರೆ ಇಂದಿಗೂ ವಿದ್ಯುತ್, ರಸ್ತೆ, ಸೇತುವೆ ಸೇರಿದಂತೆ ಮೂಲಭೂತ ಸೌಲಭ್ಯಗಳಿಂದ ಈ ಕುಟುಂಬಗಳು ವಂಚಿತರಾಗಿವೆ. ಸ್ವಾತಂತ್ರ್ಯ ಲಭಿಸಿ 79 ವರ್ಷಗಳಾದರೂ ಈ ಪ್ರದೇಶಕ್ಕೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಆಡಳಿತ ವ್ಯವಸ್ಥೆ ವಿಫಲವಾಗಿದೆ.

ಕಳೆದ ವರ್ಷ ನದಿಯ ಪ್ರವಾಹದಲ್ಲಿ ಇಬ್ಬರು ಯುವಕರು ದ್ವಿಚಕ್ರ ವಾಹನ ಸಮೇತ ಕೊಚ್ಚಿಕೊಂಡು ಹೋಗಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರು. ಘಟನೆಯ ಬಳಿಕ ತಾಲೂಕು ಹಾಗೂ ಜಿಲ್ಲಾ ಆಡಳಿತದ ಅಧಿಕಾರಿಗಳು, ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿದ್ದರು.

ಆ ಸಂದರ್ಭದಲ್ಲಿ ಸ್ಥಳೀಯರು ಕನಿಷ್ಠ ಸಂಪರ್ಕಕ್ಕಾಗಿ ಸೇತುವೆ ನಿರ್ಮಿಸುವಂತೆ ಮನವಿ ಸಲ್ಲಿಸಿದ್ದರು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತುರ್ತಾಗಿ ಸೇತುವೆ ನಿರ್ಮಿಸುವ ಭರವಸೆ ನೀಡಿದ್ದರೂ, ಒಂದು ವರ್ಷ ಕಳೆದರೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ.

ಪ್ರಸ್ತುತ ಭಾರೀ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹಿತ್ತಿಲಪೇಲ ನಿವಾಸಿಗಳು ಹೊರಜಗತ್ತಿನ ಸಂಪರ್ಕಕ್ಕಾಗಿ ಈ ನದಿಯನ್ನೇ ದಾಟಬೇಕಾದ ಅನಿವಾರ್ಯ ಸ್ಥಿತಿಯಲ್ಲಿದ್ದಾರೆ. ಕೂಲಿ ಕೆಲಸಕ್ಕೆ ತೆರಳಲು, ದಿನನಿತ್ಯದ ಅಗತ್ಯ ವಸ್ತುಗಳನ್ನು ಖರೀದಿಸಲು ಹಾಗೂ ತುರ್ತು ಆರೋಗ್ಯ ಸೇವೆ ಪಡೆಯಲು ಇದೇ ಏಕೈಕ ಮಾರ್ಗವಾಗಿದೆ.

ಸೇತುವೆ ನಿರ್ಮಿಸಲು ವಿಫಲವಾದ ಆಡಳಿತ ಇದೀಗ ನದಿ ದಾಟಬಾರದು ಎಂಬ ಸೂಚನಾ ಫಲಕ ಅಳವಡಿಸುವ ಮೂಲಕ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ನಡೆಸುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

ಈ ಕುರಿತು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ್ ಪ್ರತಿಕ್ರಿಯಿಸಿ, “ಜನಪ್ರತಿನಿಧಿಗಳು ಆದಿವಾಸಿ ಸಮುದಾಯವನ್ನು ಕೇವಲ ಮತಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಸಮುದಾಯದ ಅಭಿವೃದ್ಧಿಯ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ. ಅಧಿಕಾರಿಗಳು ಸುಳ್ಳು ಭರವಸೆ ನೀಡಿ ನಮ್ಮನ್ನು ವಂಚಿಸುತ್ತಿದ್ದಾರೆ.

ಮಲೆಕುಡಿಯ ಸಮುದಾಯವನ್ನು ಗೊಂಬೆಯಾಟದಂತೆ ಬಳಸಲಾಗುತ್ತಿದೆ. ನದಿ ದಾಟಬಾರದು ಎಂದು ಸೂಚನಾ ಫಲಕ ಹಾಕಿರುವ ಅಧಿಕಾರಿಗಳು, ಈ ಕುಟುಂಬಗಳು ದಿನನಿತ್ಯದ ಬದುಕನ್ನು ಹೇಗೆ ಸಾಗಿಸಬೇಕು ಎಂಬುದಕ್ಕೂ ಉತ್ತರ ನೀಡಬೇಕು.

ಅಗತ್ಯ ಮೂಲಸೌಕರ್ಯಗಳನ್ನು ಒದಗಿಸದೆ ಈ ರೀತಿ ದಿಗ್ಬಂಧನ ವಿಧಿಸುವುದು ನ್ಯಾಯಸಮ್ಮತವಲ್ಲ. ಈ ನಿರ್ಲಕ್ಷ್ಯ ಹಾಗೂ ಮೋಸದ ವಿರುದ್ಧ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ.




