ಗದಗ: ಬಡ್ಡಿ ದಂಧೆಕೋರರ ಕಿರುಕುಳ ಮತ್ತು ಬೆದರಿಕೆಯಿಂದ ಮನನೊಂದ 38 ವರ್ಷದ ಯುವಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗದ ಕರೆಮ್ಮಕಲ್ ಬಡಾವಣೆಯಲ್ಲಿ ನಡೆದಿದೆ.

ಮೃತರನ್ನು ಸಂಪತ್ ದಂಡಗಿ (38) ಎಂದು ಗುರುತಿಸಲಾಗಿದೆ. ಕುಟುಂಬಸ್ಥರ ಆರೋಪದಂತೆ, ಧರ್ಮಗೌಡ ಕರಿಯನಗೌಡ್ರ ಹಾಗೂ ರವಿ ಶಿವನಗುತ್ತಿ ಎಂಬವರು ಹಣ ಮತ್ತು ಬಡ್ಡಿ ವಿಚಾರವಾಗಿ ನಿರಂತರವಾಗಿ ಫೋನ್ ಮೂಲಕ ಕಿರುಕುಳ ನೀಡಿ, ಚೆಕ್ ಬೌನ್ಸ್ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ಸಂಪತ್ ಅವರ ಪತ್ನಿ ಸ್ನೇಹಾ ಅವರಿಗೂ ಕರೆ ಮಾಡಿ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಆತ್ಮಹತ್ಯೆಗೆ ಮುನ್ನ ಸಂಪತ್ ಸೆಲ್ಫಿ ವೀಡಿಯೋ ದಾಖಲಿಸಿದ್ದು, “ಇತರರಿಗೆ ಸಹಾಯ ಮಾಡಲು ಹೋಗಿ ಈ ಸ್ಥಿತಿಗೆ ಬಂದಿದ್ದೇನೆ. ನನಗೆ ಕಷ್ಟ ಬಂದಾಗ ಯಾರೂ ನೆರವಾಗಲಿಲ್ಲ. ಧರ್ಮಗೌಡರಿಂದ ಪಡೆದ ಹಣದ ವಿಚಾರವಾಗಿ ನಿರಂತರ ಬೆದರಿಕೆ ಎದುರಿಸುತ್ತಿದ್ದೆ. ಧಿಕ್ಕುತೋಚದೆ ಈ ನಿರ್ಧಾರ ಕೈಗೊಂಡಿದ್ದೇನೆ” ಎಂದು ಹೇಳಿಕೊಂಡಿರುವುದು ತಿಳಿದುಬಂದಿದೆ.

ಘಟನಾ ಸ್ಥಳದಲ್ಲಿ ಡೆತ್ನೋಟ್ ಕೂಡ ಪತ್ತೆಯಾಗಿದ್ದು, ಸುಮಾರು 60 ಲಕ್ಷ ರೂಪಾಯಿ ಹಣವನ್ನು ಬಡ್ಡಿ ಪಡೆದು ಇತರರಿಗೆ ಸಾಲವಾಗಿ ನೀಡಿದ್ದೆ ಎಂದು ಉಲ್ಲೇಖಿಸಲಾಗಿದೆ. ಕೆಲವರು ಹಣವನ್ನು ಹಿಂದಿರುಗಿಸದ ಕಾರಣ ವ್ಯವಹಾರದಲ್ಲಿ ಸಂಕಷ್ಟ ಎದುರಾಗಿ, ಆ ಸಾಲ ತೀರಿಸಲು ಮತ್ತೆ ಧರ್ಮಗೌಡರಿಂದ ಹಣ ಪಡೆದಿದ್ದಾಗಿ ಬರೆದಿದ್ದಾರೆ. ಮೊಬೈಲ್ ಆಡಿಯೋ ದಾಖಲೆಗಳು ಹಾಗೂ ಮನೆಯ ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸುವಂತೆ ಡೆತ್ ನೋಟ್ ನಲ್ಲಿ ಮನವಿ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗದ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬಸ್ಥರ ದೂರಿನ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಆತ್ಮಹತ್ಯೆಗೆ ಕಾರಣದ ಬಗ್ಗೆ ಕುಟುಂಬಸ್ಥರು ಮಾಡಿದ ಆರೋಪಗಳು ಹಾಗೂ ಡೆತ್ ನೋಟ್ ನಲ್ಲಿರುವ ಮಾಹಿತಿಯ ಪರಿಶೀಲನೆ ಪೊಲೀಸ್ ತನಿಖೆಯಲ್ಲಿದೆ. ಆರೋಪಗಳು ಇನ್ನೂ ನ್ಯಾಯಾಂಗದಲ್ಲಿ ಸಾಬೀತಾಗಿಲ್ಲ.


