Breaking
10 Jul 2026, Fri

ಕುಂದಾಪುರ: ಲಾರಿ ಡಿಕ್ಕಿಗೆ ಬೈಕ್ ಸವಾರ ಬಲಿ

ಕುಂದಾಪುರ: ರಾಷ್ಟ್ರೀಯ ಹೆದ್ದಾರಿ 66ರ ಕೊಟೇಶ್ವರದ ಕಿನಾರ ಜಂಕ್ಷನ್ ಸಮೀಪ ಬೈಕಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಜುಲೈ 9ರ ಗುರುವಾರ ನಡೆದಿದೆ.

ಮೃತರನ್ನು ಇಡೂರು ಕುಂಜಾಡಿ ಗ್ರಾಮದ ಜನ್ನಾಲು ಕೊಳ್ತಾ ನಿವಾಸಿ ಆನಂದ ಶೆಟ್ಟಿ ಅವರ ಪುತ್ರ ಭರತ್ ಶೆಟ್ಟಿ (33) ಎಂದು ಗುರುತಿಸಲಾಗಿದೆ.

ಭರತ್ ಶೆಟ್ಟಿ ಅವರು ಕೋಟೇಶ್ವರ ಸಮೀಪದ ಪೈಂಟಿಂಗ್ ಅಂಗಡಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಕೆಲಸದ ನಿಮಿತ್ತ ಕೋಟೇಶ್ವರದಿಂದ ಕುಂದಾಪುರ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಬಾಲ ಮುರುಗನ್ ಚಲಾಯಿಸುತ್ತಿದ್ದ ಲಾರಿ ಹಿಂದಿನಿಂದ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ಭರತ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಒಂದು ವರ್ಷದ ಹಿಂದಷ್ಟೇ ವಿವಾಹವಾಗಿದ್ದ ಭರತ್ ಶೆಟ್ಟಿ ಅವರು ಪತ್ನಿ ಹಾಗೂ ಕುಟುಂಬದವರನ್ನು ಅಗಲಿದ್ದಾರೆ.

ಈ ಸಂಬಂಧ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *