Breaking
10 Jul 2026, Fri

ಮಂಗಳೂರಿನಲ್ಲಿ ಅಪಘಾತದಲ್ಲಿ ಮೃತಪಟ್ಟ ಸಿಐಎಸ್‌ಎಫ್‌ ಯೋಧ ಸೀತಾರಾಮ ಗೌಡರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

ಕಡಬ: ಮಂಗಳೂರಿನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಿಐಎಸ್‌ಎಫ್‌ ಯೋಧ ಸೀತಾರಾಮ ಗೌಡ (47) ಅವರ ಅಂತ್ಯಸಂಸ್ಕಾರವನ್ನು ಜುಲೈ 9ರ ಗುರುವಾರ ಸಂಜೆ ಕಡಬ ತಾಲೂಕಿನ ಕೊಯಿಲ ಗ್ರಾಮದ ಪುತ್ಯೆಯಲ್ಲಿರುವ ಅವರ ನಿವಾಸದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

ಜುಲೈ 8ರಂದು ಸಂಜೆ ಮಂಗಳೂರಿನ ಕೆಪಿಟಿ ಬಳಿಯಿಂದ ಕೊಟ್ಟಾರ ಚೌಕಿ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ವೇಳೆ ಡಿವೈಡರ್‌ಗೆ ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಸೀತಾರಾಮ ಗೌಡ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಮರಣೋತ್ತರ ಪರೀಕ್ಷೆಯ ಬಳಿಕ ಪಾರ್ಥಿವ ಶರೀರವನ್ನು ಕೊಯಿಲಕ್ಕೆ ತರಲಾಗಿದ್ದು, ಪಾರ್ಥಿವ ಶರೀರ ಆಗಮಿಸಿದಾಗ ನೂರಾರು ಸಾರ್ವಜನಿಕರು ಭಾರತ ಮಾತಾಕೀ ಜೈ ಘೋಷಣೆಗಳೊಂದಿಗೆ ಬರಮಾಡಿಕೊಂಡು ಅಂತಿಮ ನಮನ ಸಲ್ಲಿಸಿದರು. ಬಳಿಕ ಮೆರವಣಿಗೆಯ ಮೂಲಕ ಪುತ್ಯೆ ನಿವಾಸಕ್ಕೆ ಕೊಂಡೊಯ್ಯಲಾಯಿತು.

ಸಿಐಎಸ್‌ಎಫ್‌ ಹಾಗೂ ನಿವೃತ್ತ ಸೈನಿಕರ ಸಂಘದ ವತಿಯಿಂದ ಗೌರವ ವಂದನೆ ಸಲ್ಲಿಸಿದ ಬಳಿಕ ಶರೀರವನ್ನು ಮನೆಯ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಯಿತು. ನಂತರ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಶಾಸಕಿ ಭಾಗೀರಥಿ ಮುರುಳ್ಯ, ಕಡಬ ಉಪತಹಶೀಲ್ದಾರ್ ಶಾಯದುಲ್ಲಾ ಖಾನ್, ಜಿ.ಪಂ. ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಕೊಯಿಲ ಗ್ರಾಮ ಪಂಚಾಯಿತಿ ಅಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಮೃತ ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.

ಸೀತಾರಾಮ ಗೌಡ ಅವರು 2000ರ ಜೂನ್‌ನಲ್ಲಿ ಸಿಐಎಸ್‌ಎಫ್‌ಗೆ ಸೇರ್ಪಡೆಯಾಗಿದ್ದರು. ಕುದುರೆಮುಖ, ಗುಜರಾತ್, ಹೈದರಾಬಾದ್, ಜಮ್ಮು-ಕಾಶ್ಮೀರ ಹಾಗೂ ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸೇವೆ ಸಲ್ಲಿಸಿದ್ದ ಅವರು, ಪ್ರಸ್ತುತ ಜಮ್ಮುವಿನ ಸೆಂಟ್ರಲ್ ಜೈಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಒಂದು ತಿಂಗಳ ರಜೆಯಲ್ಲಿ ಊರಿಗೆ ಬಂದಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಅವರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದು, ಕುಟುಂಬದ ದುಃಖದಲ್ಲಿ ಸ್ಥಳೀಯರು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದಾರೆ.

Leave a Reply

Your email address will not be published. Required fields are marked *