Breaking
1 Aug 2026, Sat

ಅಕ್ರಮ ಜಾನುವಾರು ಸಾಗಾಟ: ಇಬ್ಬರ ಬಂಧನ, ಎರಡು ಜಾನುವಾರು ರಕ್ಷಣೆ

ಕಡಬ: ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ–ಬಿಲ್ಲೆ ರಸ್ತೆಯ ಡಿಪ್ಪೋ ಪ್ರದೇಶದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ.

ಜೂನ್ 13ರ ಬೆಳಗಿನ ಜಾವ ಪಿಕಪ್ ವಾಹನವೊಂದು ನಿಯಂತ್ರಣ ತಪ್ಪಿ ಬಿದ್ದಿರುವ ಕುರಿತು ಮಾಹಿತಿ ಪಡೆದ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ವಾಹನದ ಚಾಲಕ ಹಾಸನ ಜಿಲ್ಲೆಯ ಅರಕಲಗೂಡು ನಿವಾಸಿ ಚಂದ್ರು ಅಲಿಯಾಸ್ ಚಂದ್ರಶೇಖರ ಹಾಗೂ ಕ್ಲೀನರ್ ಮೋಹನ್ ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆತಂದು ತನಿಖೆ ನಡೆಸಲಾಯಿತು.

ಕೂಲಂಕುಷ ವಿಚಾರಣೆಯ ವೇಳೆ, ಯಾವುದೇ ಪರವಾನಗಿ ಇಲ್ಲದೆ ಎರಡು ಜಾನುವಾರುಗಳನ್ನು ಮಾಂಸಕ್ಕಾಗಿ ಮಾರಾಟ ಮಾಡುವ ಉದ್ದೇಶದಿಂದ ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನ ಅಪಘಾತಕ್ಕೀಡಾದ ಬಳಿಕ ಜಾನುವಾರುಗಳನ್ನು ವಾಹನದಿಂದ ಇಳಿಸಿ ಹಗ್ಗ ಬಿಚ್ಚಿ ಓಡಿಸಿರುವುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಘಟನಾ ಸ್ಥಳದ ಸಮೀಪದಲ್ಲೇ ಎರಡು ಜಾನುವಾರುಗಳನ್ನು ಪತ್ತೆಹಚ್ಚಿದ ಪೊಲೀಸರು ಅವುಗಳನ್ನು ರಕ್ಷಿಸಿ ವಶಕ್ಕೆ ಪಡೆದಿದ್ದಾರೆ.

ಪ್ರಕರಣಕ್ಕೆ ಬಳಸಿದ ಪಿಕಪ್ ವಾಹನ ಹಾಗೂ ಎರಡು ಜಾನುವಾರುಗಳನ್ನು ಸ್ವಾಧೀನಪಡಿಸಿಕೊಂಡಿರುವ ಪೊಲೀಸರು, ಆರೋಪಿಗಳ ವಿರುದ್ಧ ಕರ್ನಾಟಕ ಗೋವುಗಳ ಸಂರಕ್ಷಣಾ ಮತ್ತು ಜಾನುವಾರು ಪ್ರತಿಬಂಧಕ ಕಾಯ್ದೆ, ಪ್ರಾಣಿ ಸಂರಕ್ಷಣಾ ಕಾಯ್ದೆ ಹಾಗೂ ಭಾರತೀಯ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *