ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲಿನ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿದ್ದು, ಜುಲೈ 31ರ ಸಂಜೆ ದೇವಸ್ಥಾನದ ಸ್ನಾನಘಟ್ಟ ಸಂಪೂರ್ಣ ಜಲಾವೃತಗೊಂಡಿದೆ.

ನೀರಿನ ಮಟ್ಟ ಏರಿಕೆಯಿಂದ ಸ್ನಾನಘಟ್ಟದ ಮೆಟ್ಟಿಲುಗಳು ಸಂಪೂರ್ಣ ಮುಳುಗಡೆಯಾಗಿದ್ದು, ಡ್ರೆಸ್ಸಿಂಗ್ ಕೊಠಡಿ, ಶೌಚಾಲಯ ಸೇರಿದಂತೆ ಸಮೀಪದ ಸೌಲಭ್ಯಗಳಿಗೂ ನೀರು ನುಗ್ಗಿದೆ. ನದಿಯಲ್ಲಿ ನೀರಿನ ರಭಸ ಹೆಚ್ಚಿರುವುದರಿಂದ ಪ್ರದೇಶ ಅಪಾಯಕಾರಿಯಾಗಿ ಮಾರ್ಪಟ್ಟಿದೆ.

ಭಕ್ತರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕೆಲವು ದಿನಗಳ ಹಿಂದೆಯೇ ಕುಮಾರಧಾರಾ ನದಿಯಲ್ಲಿ ತೀರ್ಥಸ್ನಾನವನ್ನು ದೇವಸ್ಥಾನ ಆಡಳಿತ ತಾತ್ಕಾಲಿಕವಾಗಿ ನಿಷೇಧಿಸಿತ್ತು. ಪರ್ಯಾಯ ವ್ಯವಸ್ಥೆಯಾಗಿ ದೇವಸ್ಥಾನದ ವತಿಯಿಂದ ಡ್ರಮ್‌ಗಳಲ್ಲಿ ನೀರು ಸಂಗ್ರಹಿಸಿ ಭಕ್ತರಿಗೆ ಸ್ನಾನದ ವ್ಯವಸ್ಥೆ ಮಾಡಲಾಗಿದೆ.

ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನದಿಯ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಿದ್ದು, ಭಕ್ತರು ಹಾಗೂ ಸಾರ್ವಜನಿಕರು ನದಿ ತೀರಕ್ಕೆ ತೆರಳದಂತೆ ಮತ್ತು ದೇವಸ್ಥಾನ ಆಡಳಿತದ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.





