Breaking
1 Aug 2026, Sat

ಮೂಡುಬಿದಿರೆ: ಸಹೋದರಿಯೊಂದಿಗೆ ವಿಡಿಯೋ ಕರೆ ವೇಳೆ ನೇಣು ಬಿಗಿದುಕೊಂಡು ವಿವಾಹಿತ ಆತ್ಮಹತ್ಯೆ

ಮೂಡುಬಿದಿರೆ: ಬೆಳುವಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಣಿಲ್‌ನಲ್ಲಿ 25 ವರ್ಷದ ವಿವಾಹಿತನೊಬ್ಬ ಸಹೋದರಿಯೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡುತ್ತಿದ್ದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಲೈ 31ರಂದು ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕಾಜೂರು ಮೂಲದ ಸಯ್ಯದ್ ಅನ್ವರ್ (25) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಇವರು ಬೆಳುವಾಯಿಯಲ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಪತಿ-ಪತ್ನಿ ನಡುವೆ ಆಗಾಗ ಕಲಹ ಉಂಟಾಗುತ್ತಿತ್ತು ಎಂದು ತಿಳಿದುಬಂದಿದೆ. ಈ ಸಂಬಂಧ ಈ ಹಿಂದೆ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಾಗಿತ್ತು ಎನ್ನಲಾಗಿದೆ.

ಮೀನಿನ ಟೆಂಪೋ ಚಾಲಕರಾಗಿದ್ದ ಅನ್ವರ್ ಕಳೆದ ಕೆಲವು ದಿನಗಳಿಂದ ಕೆಲಸವಿಲ್ಲದೆ ಮನೆಯಲ್ಲಿದ್ದರು. ಗುರುವಾರ ಮತ್ತೆ ಪತಿ-ಪತ್ನಿ ನಡುವೆ ಜಗಳ ನಡೆದಿದ್ದು, ಪತ್ನಿ ಎರಡು ವರ್ಷದ ಮಗುವಿನೊಂದಿಗೆ ತವರು ಮನೆಗೆ ತೆರಳಿದ್ದರು.

ಇದಾದ ಬಳಿಕ ಅನ್ವರ್ ತಮ್ಮ ಸಹೋದರಿಗೆ ವಿಡಿಯೋ ಕರೆ ಮಾಡಿ, ಪತ್ನಿ ಮನೆಯವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದರೆಂದು ತಿಳಿದುಬಂದಿದೆ. ವಿಷಯ ತಿಳಿದ ಕುಟುಂಬಸ್ಥರು ತಕ್ಷಣ ಮನೆಗೆ ಧಾವಿಸಿದರೂ, ಆಗಲೇ ಅವರು ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.

ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *