Breaking
1 Aug 2026, Sat

ಮಗಳ ಮದುವೆ ವಿಚಾರದ ಕಲಹ: ಸಹ ಪ್ರಾಧ್ಯಾಪಕಿಯ ಮೇಲೆ ತಂದೆಯಿಂದ ಮಾರಣಾಂತಿಕ ಹಲ್ಲೆ

ಬೆಂಗಳೂರು: ಹಣದಾಸೆ ಮತ್ತು ಕೌಟುಂಬಿಕ ಕಲಹದ ಹಿನ್ನೆಲೆ ತಂದೆಯೇ ಮಗಳ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಹಲ್ಲೆಗೊಳಗಾದವರನ್ನು ಲಕ್ಷ್ಮೀ ದುರ್ಗಾ ಎಂದು ಗುರುತಿಸಲಾಗಿದ್ದು, ಅವರು ರಾಜನಕುಂಟೆ ಸಮೀಪದ ಎಸ್ಐವಿಐಟಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆರೋಪಿ ತಂದೆ ನಾಗೇಂದ್ರ ಅವರನ್ನು ಪೊಲೀಸರು ಬಂಧಿಸಿದ್ದಾರೆ.


ಮಗಳ ವಿವಾಹದ ವಿಚಾರದಲ್ಲಿ ತಂದೆ-ಮಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಮಗಳ ಶಿಕ್ಷಣಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವುದಾಗಿ ಹೇಳಿದ ನಾಗೇಂದ್ರ, ಮದುವೆಗೆ ಒಪ್ಪಿಗೆ ನೀಡುವ ಮುನ್ನ ವರನ ಕಡೆಯಿಂದ 40 ಲಕ್ಷ ರೂ. ಹಾಗೂ ಮಗಳ ಮಾಸಿಕ ಸಂಬಳವನ್ನು ತಮಗೆ ನೀಡಬೇಕೆಂದು ಷರತ್ತು ವಿಧಿಸಿದ್ದ ಎನ್ನಲಾಗಿದೆ. ಇದಕ್ಕೆ ಲಕ್ಷ್ಮೀ ದುರ್ಗಾ ಹಾಗೂ ಅವರ ತಾಯಿ ವಿರೋಧ ವ್ಯಕ್ತಪಡಿಸಿದ್ದರಿಂದ ಕುಟುಂಬದಲ್ಲಿ ಮನಸ್ತಾಪ ಹೆಚ್ಚಾಗಿತ್ತು.


ಈ ಹಿನ್ನೆಲೆಯಲ್ಲಿ ಲಕ್ಷ್ಮೀ ದುರ್ಗಾ ಮನೆ ಬಿಟ್ಟು ಬಾಡಿಗೆ ಮನೆಯಲ್ಲಿ ವಾಸವಿದ್ದು, ಅಲ್ಲಿಂದಲೇ ಕಾಲೇಜಿಗೆ ತೆರಳುತ್ತಿದ್ದರು. ಜುಲೈ 25ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ನಾಗೇಂದ್ರ ಕಾಲೇಜಿಗೆ ತೆರಳಿ ಮಗಳನ್ನು ಭೇಟಿ ಮಾಡಿದ ವೇಳೆ ಏಕಾಏಕಿ ಚಾಕುವಿನಿಂದ ಎದೆ, ಕುತ್ತಿಗೆ ಸೇರಿದಂತೆ ದೇಹದ ಹಲವು ಭಾಗಗಳಿಗೆ ಇರಿದು ಪರಾರಿಯಾಗಿದ್ದಾನೆ.


ಗಂಭೀರವಾಗಿ ಗಾಯಗೊಂಡ ಲಕ್ಷ್ಮೀ ದುರ್ಗಾ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಹೋದ್ಯೋಗಿಗಳು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ನಾಗೇಂದ್ರನನ್ನು ಬಂಧಿಸಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *