Breaking
8 Sep 2026, Tue

ಚಿಕ್ಕಮಗಳೂರು: 40 ಅಡಿ ಪ್ರಪಾತಕ್ಕೆ ಉರುಳಿದ ಪ್ರವಾಸಿ ಜೀಪ್; ಚಾಲಕ, ಮೂವರು ಪ್ರವಾಸಿಗರು ಪಾರು

ಚಿಕ್ಕಮಗಳೂರು: ಜಿಲ್ಲೆಯ ಚಂದ್ರದ್ರೋಣ ಪರ್ವತ ಸಾಲಿನ ಪ್ರಸಿದ್ಧ ಝರಿ ಫಾಲ್ಸ್ ಸಮೀಪ ಚಾಲಕನ ನಿಯಂತ್ರಣ ತಪ್ಪಿದ ಪ್ರವಾಸಿ ಜೀಪೊಂದು ಸುಮಾರು 40 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದ ಘಟನೆ ಮಂಗಳವಾರ(ಸೆ.08) ನಡೆದಿದೆ.

ಕೇರಳ ಮೂಲದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪ್, ನಿಯಂತ್ರಣ ತಪ್ಪಿ ಸುಮಾರು 40 ಅಡಿ ಆಳಕ್ಕೆ ಉರುಳಿ ಕೆಳಭಾಗದಲ್ಲಿದ್ದ ಕಾರ್ಮಿಕರ ಮನೆಯ ಮೇಲೆ ಬಿದ್ದಿದೆ. ಅಪಘಾತದ ರಭಸಕ್ಕೆ ಜೀಪ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರ್ಮಿಕರ ವಾಸದ ಮನೆಗೂ ಹಾನಿಯಾಗಿದೆ.

ಅದೃಷ್ಟವಶಾತ್ ಜೀಪ್‌ನಲ್ಲಿದ್ದ ಚಾಲಕ ಸೇರಿದಂತೆ ಮೂವರು ಪ್ರವಾಸಿಗರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ರಕ್ಷಿಸಿ ನೆರವಾದರು.

ಚಾಲಕನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಘಟನೆ ಕುರಿತು ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *