ಮುಲ್ಕಿ: ಸುಮಾರು ಏಳು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಳವು ಪ್ರಕರಣದ ಆರೋಪಿಯನ್ನು ಮುಲ್ಕಿ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ.

ತಮಿಳುನಾಡಿನ ತಿರುಪ್ಪುರ ಜಿಲ್ಲೆಯ ತಿರುಪ್ಪುರ ಗ್ರಾಮದ ಶಾಸ್ತ್ರಿ ಸ್ಟ್ರೀಟ್ ನಿವಾಸಿ ನಾಗರಾಜನ್ (38) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
2018ರಲ್ಲಿ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ದೈವಸ್ಥಾನವೊಂದರಲ್ಲಿ ಕಳವು ನಡೆಸಿದ ಆರೋಪ ನಾಗರಾಜನ್ ವಿರುದ್ಧವಿದ್ದು, ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಕಳೆದ ಏಳು ವರ್ಷಗಳಿಂದ ಆತ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.

ಆತನ ಬಂಧನಕ್ಕಾಗಿ ಮೂಡುಬಿದಿರೆ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ನ್ಯಾಯಾಲಯದಿಂದ ದಸ್ತಗಿರಿ ವಾರಂಟ್ ಹಾಗೂ ಪ್ರೋಕ್ಲಮೇಷನ್ ಹೊರಡಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಮುಲ್ಕಿ ಪೊಲೀಸರು ತಮಿಳುನಾಡಿನ ತಿರುಪ್ಪುರ ಜಿಲ್ಲೆಯಲ್ಲಿ ನಾಗರಾಜನ್ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.




