Breaking
25 Aug 2026, Tue

ಕೊಲ್ನಾಡು ಹೆದ್ದಾರಿಯಲ್ಲಿ ಭೀಕರ ಅಪಘಾತ: ಕಾರು ಪಲ್ಟಿಯಾಗಿ ಟೆಂಪೋಗೆ ಡಿಕ್ಕಿ, ಐವರು ಪವಾಡ ಸದೃಶ ಪಾರು

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಕೊಲ್ನಾಡು ಬಳಿ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಹಣ್ಣುಹಂಪಲು ಮಾರಾಟ ಮಾಡುತ್ತಿದ್ದ ಮಿನಿ ಗೂಡ್ಸ್ ಟೆಂಪೋಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಹಾಗೂ ಟೆಂಪೋದಲ್ಲಿದ್ದ ಇಬ್ಬರು ಸೇರಿದಂತೆ ಐವರು ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಗಾಯಾಳುಗಳನ್ನು ಬೆಂಗಳೂರು ಡಾಲರ್ಸ್ ಕಾಲೋನಿ ನಿವಾಸಿಗಳಾದ ಸಂಪತ್ ಶೆಟ್ಟಿ (69), ಮಮತಾ ಶೆಟ್ಟಿ (28), ಸುಮಿತ್ರ ಹಾಗೂ ಟೆಂಪೋ ಚಾಲಕ ಬಷೀರ್ (42), ಆಸಿಫ್ (23) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಮುಕ್ಕ ಆಸ್ಪತ್ರೆಗೆ ದಾಖಲಿಸಲಾಗಿದೆ.


ಬೆಂಗಳೂರು ಕಡೆಯಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಕಾರು ಕೊಲ್ನಾಡು ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಹೆದ್ದಾರಿಯ ಎಡಬದಿಗೆ ಚಲಿಸಿ, ಅಲ್ಲಿ ಹಣ್ಣುಹಂಪಲು ಮಾರಾಟ ಮಾಡುತ್ತಿದ್ದ ಮಿನಿ ಗೂಡ್ಸ್ ಟೆಂಪೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿ ಚರಂಡಿಗೆ ಬಿದ್ದಿದ್ದು, ಟೆಂಪೋದ ಮೇಲ್ಭಾಗ ಕತ್ತರಿಸಲ್ಪಟ್ಟು ಹೆದ್ದಾರಿ ಡಿವೈಡರ್ ಮೇಲೆ ಬಿದ್ದಿದೆ.


ಅಪಘಾತದ ಬಳಿಕ ಕಾರಿನೊಳಗೆ ಸಿಲುಕಿದ್ದ ಗಾಯಾಳುಗಳನ್ನು ಸಾಮಾಜಿಕ ಕಾರ್ಯಕರ್ತ ನಿರಂಜನ್ ಹರಿಪಾದೆ ಹಾಗೂ ಮತ್ತಿತರರು ಹೊರತೆಗೆದು, ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಪಘಾತದಿಂದ ಕೆಲಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ತಕ್ಷಣ ಹೆದ್ದಾರಿ ಇಲಾಖೆಯ ಸಿಬ್ಬಂದಿ ಹಾಗೂ ಮಂಗಳೂರು ಉತ್ತರ ಸಂಚಾರ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಚಾರ ನಿಯಂತ್ರಿಸಿದರು. ಬಳಿಕ ಕ್ರೇನ್ ಮೂಲಕ ಅಪಘಾತಕ್ಕೀಡಾದ ಕಾರನ್ನು ಸ್ಥಳದಿಂದ ತೆರವುಗೊಳಿಸಲಾಯಿತು.


ಕೊಲ್ನಾಡು ರಾಷ್ಟ್ರೀಯ ಹೆದ್ದಾರಿ ಬದಿಯ ಅಪಾಯಕಾರಿ ಪ್ರದೇಶಗಳಲ್ಲಿ ಹಣ್ಣುಹಂಪಲು ಮಾರಾಟಗಾರರು ಹಾಗೂ ಕೆಲ ಲಾರಿ ಚಾಲಕರು ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಂಡು ಅಪಾಯಕಾರಿ ರೀತಿಯಲ್ಲಿ ವಾಹನ ನಿಲುಗಡೆ ಹಾಗೂ ವ್ಯಾಪಾರವನ್ನು ನಿಯಂತ್ರಿಸಬೇಕು ಎಂದು ಸ್ಥಳೀಯರಾದ ದಿನೇಶ್ ಕೊಲ್ನಾಡ್ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *