Breaking
13 Oct 2026, Tue

ಉಡುಪಿ: 25 ಗಂಟೆಗಳ ದಾಸರಪದ ಗಾಯನ; ಸಂಗೀತಾ ಬಾಲಚಂದ್ರ ವಿಶ್ವ ದಾಖಲೆ

ಉಡುಪಿ: ನಿರಂತರ 25 ಗಂಟೆಗಳ ಕಾಲ ಏಕವ್ಯಕ್ತಿ ದಾಸರಪದ ಗಾಯನ ನಡೆಸಿದ ವಿದುಷಿ ಸಂಗೀತಾ ಬಾಲಚಂದ್ರ ಅವರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಉಡುಪಿಯ ಗೀತಾ ಮಂದಿರದಲ್ಲಿರುವ ಶ್ರೀ ಪುತ್ತಿಗೆ ನೃಸಿಂಹ ಸಭಾಂಗಣದಲ್ಲಿ ನಡೆದ ‘ಪಂಚವಿಶಂತಿ’ ಕಾರ್ಯಕ್ರಮದಲ್ಲಿ ಸಂಗೀತಾ ಬಾಲಚಂದ್ರ ಅವರ ದಾಸರಪದ ಗಾಯನ ಭಕ್ತಿಭಾವದ ವಾತಾವರಣವನ್ನು ಸೃಷ್ಟಿಸಿತು. ರವಿವಾರ ಬೆಳಗ್ಗೆ 6.41ಕ್ಕೆ ಆರಂಭವಾದ ಗಾಯನ ಸೋಮವಾರ ಬೆಳಗ್ಗೆ 7.30ರವರೆಗೆ ಸತತವಾಗಿ ನಡೆಯಿತು.

25 ಗಂಟೆಗಳ ಗಾಯನದ ಅವಧಿಯಲ್ಲಿ ಪ್ರತಿ ಮೂರು ಗಂಟೆಗಳಿಗೊಮ್ಮೆ 15 ನಿಮಿಷಗಳ ಕಾಲ ನೀರು ಹಾಗೂ ಕನಿಷ್ಠ ಆಹಾರ ಸೇವನೆಗಾಗಿ ವಿಶ್ರಾಂತಿ ಪಡೆಯಲಾಗಿತ್ತು. ಯಾವುದೇ ಅಡೆತಡೆಯಿಲ್ಲದೆ ದೀರ್ಘಾವಧಿಯ ಗಾಯನ ಪೂರ್ಣಗೊಳಿಸುವ ಮೂಲಕ ಅವರು ವಿಶಿಷ್ಟ ಸಾಧನೆ ಮಾಡಿದರು.

ಸಾಧನೆಯನ್ನು ಗುರುತಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ಏಷ್ಯಾ ಹೆಡ್ ಡಾ. ಮನೀಷ್ ವಿಷ್ಣೋಯಿ ಅವರು ದಾಖಲೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಅದಮಾರು ಮಠಾಧೀಶ ಪರಮಪೂಜ್ಯ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಸಂಗೀತಾ ಬಾಲಚಂದ್ರ ಅವರ ಸಾಧನೆಯನ್ನು ಶ್ಲಾಘಿಸಿ, ‘ಗೀತ ಗಂಗೋತ್ರಿ’ ಎಂಬ ಬಿರುದನ್ನು ನೀಡಿ ಗೌರವಿಸಿದರು.

ದಾಸರಪದಗಳ ಮೂಲಕ ಭಕ್ತಿ ಸಂಗೀತವನ್ನು ನಿರಂತರವಾಗಿ ಜನರಿಗೆ ತಲುಪಿಸಿದ ಸಂಗೀತಾ ಬಾಲಚಂದ್ರ ಅವರ 25 ಗಂಟೆಗಳ ಗಾಯನ ಇದೀಗ ವಿಶ್ವ ದಾಖಲೆಯ ಪುಟ ಸೇರಿದೆ.

Leave a Reply

Your email address will not be published. Required fields are marked *