Breaking
25 Aug 2026, Tue

ಪದ್ಮುಂಜ: ಶಾಸಕ ಹರೀಶ್ ಪೂಂಜಾರಿಗೆ ಗೌರವಾಭಿನಂದನೆ; 40ಕ್ಕೂ ಹೆಚ್ಚು ಸಂಘ-ಸಂಸ್ಥೆಗಳಿಂದ ಸನ್ಮಾನ

ಪದ್ಮುಂಜ: ಪ್ರತಿಷ್ಠಿತ ಕರ್ನಾಟಕ ಟಿವಿ ಕೊಡಮಾಡುವ ಕರಾವಳಿ ಹಾಗೂ ಮಧ್ಯ ಕರ್ನಾಟಕ ವಿಭಾಗದ ‘ಉತ್ತಮ ಶಾಸಕ ಪ್ರಶಸ್ತಿ’ಗೆ ಪುರಸ್ಕೃತರಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಬಂದಾರು, ಮೊಗ್ರು ಹಾಗೂ ಕಣಿಯೂರು ಗ್ರಾಮದ ಅಭಿನಂದನಾ ಸಮಿತಿ ವತಿಯಿಂದ ಗೌರವಾಭಿನಂದನೆ-2026 ಕಾರ್ಯಕ್ರಮ ಆ.23ರಂದು ನಡೆಯಿತು.

ಪದ್ಮುಂಜ ಸಿ.ಎ. ಬ್ಯಾಂಕ್ ರೈತ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಸಂಘ-ಸಂಸ್ಥೆಗಳ ವತಿಯಿಂದ ಶಾಸಕರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜಾ,“ನನಗೆ ನೀಡಿದ ಪ್ರೀತಿಯ ಸನ್ಮಾನವನ್ನು ಅತ್ಯಂತ ಗೌರವದಿಂದ ಸ್ವೀಕರಿಸುತ್ತೇನೆ. ಆದರೆ ಈ ಸನ್ಮಾನ ನನಗಲ್ಲ, ಬಂದಾರು, ಮೊಗ್ರು ಹಾಗೂ ಕಣಿಯೂರು ಗ್ರಾಮದ ಜನರಿಗೆ ಅರ್ಪಿತ” ಎಂದರು.

ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, 100 ವೆಂಟೆಡ್ ಡ್ಯಾಂ ನಿರ್ಮಿಸುವ ಕನಸಿನ ಪೈಕಿ ಸುಮಾರು 84 ವೆಂಟೆಡ್ ಡ್ಯಾಂಗಳು ನಿರ್ಮಾಣಗೊಂಡಿವೆ. ರಾಜ್ಯ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಬರುತ್ತಿಲ್ಲವಾದರೂ ತಾಲೂಕಿನ ಜನರಿಗಾಗಿ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುವುದಾಗಿ ಹೇಳಿದರು.

ಅಭಿನಂದನಾ ಭಾಷಣ ಮಾಡಿದ ಸಾವಯವ ಕೃಷಿಕ ದೇವಿಪ್ರಸಾದ್ ಕೆ.ಗೌಡ, ಶಾಸಕ ಹರೀಶ್ ಪೂಂಜಾ ಅವರು ‘ನವ ಬೆಳ್ತಂಗಡಿ ನಿರ್ಮಾಣದ ಶಿಲ್ಪಿ’ ಎಂದು ಬಣ್ಣಿಸಿದರು. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯಿಂದಾಗಿ ಬೆಳ್ತಂಗಡಿಯ ಬಗ್ಗೆ ಹೊರಗಿನವರ ದೃಷ್ಟಿಕೋನ ಬದಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಾರುತಿಪುರ ರೈತಬಂಧು ಶ್ರೀ ಶಿವಶಂಕರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ, ಶ್ರೀ ಮನೋಹರ ಗೌಡ ಅಂತರ ಮುಗೇರಡ್ಕ, ಶ್ರೀ ಚಂದ್ರಹಾಸ ಗೌಡ ದೇವಸ್ಯಗುತ್ತು ಮುಗೇರಡ್ಕ, ಮಾವಿನಕಟ್ಟೆ ಚರ್ಚ್ ಧರ್ಮಗುರುಗಳಾದ ಫಾ. ಕಾಶ್ಮೀರ್ ಡಿ ಸೋಜಾ, ಶ್ರೀ ಸುದರ್ಶನ ಹೆಗ್ಡೆ ಕಣಿಯೂರು ಗುತ್ತು, ಶ್ರೀ ಪದ್ಮನಾಭ ಶಿಲ್ಪಿ ಪಿಲಿಗೂಡು, ಶ್ರೀ ಚಿದಾನಂದ ರಾವ್ ಕೊಲ್ಲಾಜೆ, ಶ್ರೀ ಬಾಬು ನಾಯ್ಕ ಮೈಪಾಜೆ ಕಣಿಯೂರು, ಶ್ರೀ ಕೇಶವ ಸಾಲ್ಯಾನ್ ಅಡೆಂಜ, ಪತ್ರಕರ್ತರಾದ ಅಚ್ಚುಶ್ರೀ ಬಾoಗೇರು, ಶ್ರೀ ಜನಾರ್ಧನ ಪೂಜಾರಿ ಕಡ್ತಿಲ ಮೊಗ್ರು, ಶ್ರೀ ಆನಂದ ಗೌಡ ಮುಂಡೂರು ಮೈರೋಳ್ತಡ್ಕ, ಶ್ರೀ ಧರ್ನಪ್ಪ ಗೌಡ ಬಾನಡ್ಕ ಮೈರೋಳ್ತಡ್ಕ, ಶ್ರೀ ಧರ್ನಪ್ಪ ಗೌಡ ಕೋಡಿಯೇಲು, ಶ್ರೀ ತಿಮ್ಮಯ್ಯ ಗೌಡ ನಿವೃತ್ತ ಸಿಎ ಬ್ಯಾಂಕ್ ಮ್ಯಾನೇಜರ್ ಪದ್ಮುಂಜ ಹಾಗೂ ಇನ್ನೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಕು. ಪೂರ್ವಿಕ ವಂದೇ ಮಾತರಂ ಹಾಡಿದರು. ಮಾಜಿ ತಾಲೂಕು ಪಂಚಾಯತ್ ಸದಸ್ಯ ಮಹಾಬಲ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾಧವ ಗೌಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಾವಿರಕ್ಕೂ ಅಧಿಕ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಭಿನಂದನಾ ಸಮಿತಿ ಪದಾಧಿಕಾರಿಗಳು ಹಾಗೂ ರಕ್ಷಿತ್ ಪಣೆಕ್ಕರ, ಬಾಲಕೃಷ್ಣ ಗೌಡ ಮುಗೇರಡ್ಕ, ಯತೀಶ್ ಶೆಟ್ಟಿ ಪಣೆಕ್ಕರ, ಗಿರೀಶ್ ಗೌಡ ಬಿ.ಕೆ. ಬಂದಾರು ಸೇರಿದಂತೆ ಹಲವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Leave a Reply

Your email address will not be published. Required fields are marked *