ಬಂಟ್ವಾಳ: ತಾಲ್ಲೂಕಿನ ಗಾಣಿಗರ ಸೇವಾ ಸಂಘದ ವತಿಯಿಂದ ವಿವಿಧ ಗ್ರಾಮಗಳನ್ನು ಒಗ್ಗೂಡಿಸಿ ವಲಯ ಸಂಘಗಳನ್ನು ರಚಿಸುವ ಮೂಲಕ ಸಂಘದ ಬಲವರ್ಧನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ ಹೇಳಿದರು.

ವಗ್ಗ ಪಚ್ಚಾಜೆ ಸಭಾಂಗಣದಲ್ಲಿ ಭಾನುವಾರ ನಡೆದ ವಲಯ ಗಾಣಿಗರ ಸಂಘ ರಚನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಂಘದ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘವು ಕೈಗೊಂಡಿರುವ ವಿವಿಧ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.

ಪಿಲಿಂಗಾಲು ಶ್ರೀ ಗಾಯತ್ರಿದೇವಿ ದೇವಳದ ಆಡಳಿತ ಧರ್ಮದರ್ಶಿ ಕೆ.ಎಸ್. ಪಂಡಿತ್, ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಕೆಮ್ಮನಾಜೆ ಹಾಗೂ ಸುಮಂಗಲಾ ಕ್ರೆಡಿಟ್ ಸೊಸೈಟಿಯ ನಿರ್ದೇಶಕ ಪದ್ಮನಾಭ ಇಡ್ಕಿದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಸುರೇಶ್ ಬಂಗೇರ ಮಾಂಗಾಜೆ ಅವರ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳ ತಂಡವನ್ನು ರಚಿಸಲಾಯಿತು.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸ್ಯಾಕ್ಸೋಫೋನ್ ವಾದಕ ಕೆ. ಬಾಬು ಸಪಲ್ಯ ವಗ್ಗ, ಪ್ರಗತಿಪರ ಕೃಷಿಕ ರಾಮಣ್ಣ ಬಡಗುಂಡಿ, ಮಹಿಳಾ ಪ್ರತಿನಿಧಿಗಳಾದ ಉಷಾ ಗಂಗಾಧರ ಹಾಗೂ ಅನಿತಾ ಅನಿಲ್ ದೋಟ ಮತ್ತಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಧನ್ಯಾ ಸ್ವಾಗತಿಸಿದರು. ಅಭಿಷೇಕ್ ಪಿಲಿಂಗಾಲು ವಂದಿಸಿದರು. ದಿನೇಶ್ ವಗ್ಗ ಹಾಗೂ ಚೇತನ್ ಪಿಲಿಂಗಾಲು ಕಾರ್ಯಕ್ರಮ ನಿರೂಪಿಸಿದರು.




