Breaking
7 Sep 2026, Mon

ಪೊಳಲಿ: ‘ಪ್ರಜಾಸೇವೆ’ ಆಂದೋಲನ ಸಭೆಗೆ ಚಾಲನೆ; ಜನಸಾಮಾನ್ಯರ ಅಲೆದಾಟ ತಪ್ಪಿಸಿ: ಶಾಸಕ

ಬಂಟ್ವಾಳ: ಸರ್ಕಾರಿ ಕಚೇರಿಗಳಿಗೆ ಜನಸಾಮಾನ್ಯರು ಅನಗತ್ಯವಾಗಿ ಅಲೆದಾಡುವುದನ್ನು ತಪ್ಪಿಸಲು ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಹೇಳಿದರು.

ಕರಿಯಂಗಳ ಗ್ರಾಮದ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಳದ ಸಭಾಂಗಣದಲ್ಲಿ ಶನಿವಾರ ನಡೆದ ‘ಪ್ರಜಾಸೇವೆ ಆಂದೋಲನ ಸಭೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಜಾಸೇವೆ ಆಂದೋಲನ ಕಾರ್ಯಕ್ರಮ ಕೇವಲ ಕಾಟಾಚಾರಕ್ಕೆ ಸೀಮಿತವಾಗದೆ, ಅರ್ಹ ಫಲಾನುಭವಿಗಳಿಗೆ ಗರಿಷ್ಠ ಪ್ರಯೋಜನ ದೊರೆಯುವಂತಾಗಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಸಲಹೆ ನೀಡಿದರು.

ಸಭೆಯಲ್ಲಿ ಹೊಸ ಪಡಿತರ ಚೀಟಿ, ಅಕ್ರಮ-ಸಕ್ರಮ, 94ಸಿ ಅರ್ಜಿ ವಿಲೇವಾರಿ, ಜಮೀನಿನ 1-5 ಸಮಸ್ಯೆ, ಮನೆ ನಿವೇಶನ ಹಂಚಿಕೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ನಾಗರಿಕರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸರ್ಕಾರಿ ಬಸ್ ಸೌಲಭ್ಯಕ್ಕೆ ಆಗ್ರಹ:
ಬಿ.ಸಿ.ರೋಡು–ಪೊಳಲಿ–ಮಂಗಳೂರು ನಡುವೆ ಸರ್ಕಾರಿ ಬಸ್ ಸಂಚಾರ ಆರಂಭಿಸಬೇಕು. ಇದರಿಂದ ಗ್ರಾಮೀಣ ಭಾಗದ ಜನರಿಗೂ ಸರ್ಕಾರದ ಶಕ್ತಿ ಯೋಜನೆಯ ಸೌಲಭ್ಯ ದೊರೆಯುವಂತಾಗಬೇಕು ಎಂದು ಸ್ಥಳೀಯ ನಿವಾಸಿ ಬಶೀರ್ ಆಗ್ರಹಿಸಿದರು.

ತಹಶೀಲ್ದಾರ್ ಜಿ. ಮಂಜುನಾಥ್ ಮಾತನಾಡಿ, ಸರ್ಕಾರದ ಆದೇಶದಂತೆ ರಾಜ್ಯಾದ್ಯಂತ ಆರಂಭಗೊಂಡಿರುವ ಪ್ರಜಾಸೇವೆ ಆಂದೋಲನ ಸಭೆಗಳು ಜನರಿಗೆ ಅನುಕೂಲವಾಗಲಿವೆ ಎಂದರು.

ಬೂಡ ಅಧ್ಯಕ್ಷ ಬೇಬಿ ಕುಂದರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ. ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ, ತಾಲೂಕು ಪಂಚಾಯಿತಿ ಇಒ ಸಚಿನ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ತೀರ್ಥಪ್ರಸಾದ್, ಉಪ ತಹಶೀಲ್ದಾರ್ ನರೇಂದ್ರನಾಥ ಮಿತ್ತೂರು, ನವೀನ್ ಕುಮಾರ್ ಬೆಂಜನಪದವು, ದಿವಾಕರ ಮುಗುಳ್ಯ, ಶಿವಪ್ರಸಾದ್, ಆಸಿಫ್ ಇಕ್ಬಾಲ್, ಕಂದಾಯ ನಿರೀಕ್ಷಕ ವಿಜಯ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಟಾಚಾರದ ಸಭೆ ಆರೋಪ:
ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ವಿವಿಧೆಡೆ ಮೊಸರು ಕುಡಿಕೆ ಉತ್ಸವಗಳು ನಡೆಯುತ್ತಿದ್ದ ಸಂದರ್ಭದಲ್ಲಿ, ತಾಲೂಕು ಕೇಂದ್ರ ಬಿ.ಸಿ.ರೋಡಿನಿಂದ ದೂರವಿರುವ ಪೊಳಲಿಯಲ್ಲಿ ಪ್ರಥಮ ಪ್ರಜಾಸೇವೆ ಆಂದೋಲನ ಸಭೆ ಆಯೋಜಿಸಿರುವುದರಿಂದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂಬ ಆರೋಪವೂ ಸ್ಥಳೀಯರಿಂದ ಕೇಳಿಬಂದಿದೆ.

Leave a Reply

Your email address will not be published. Required fields are marked *