ಹೊಸಂಗಡಿ: ಅಂಗಡಿಪದವಿನ ಬಾಡಿಗೆ ಮನೆಯಲ್ಲಿ ಶುಕ್ರವಾರ ರಾತ್ರಿ ಕೂಲಿ ಕಾರ್ಮಿಕನೊಬ್ಬನನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮಂಜೇಶ್ವರ ಪೊಲೀಸರು ಶನಿವಾರ ರಾತ್ರಿ ಮಂಗಳೂರಿನ ಪಡೀಲ್‌ನ ಮನೆಯೊಂದರಿಂದ ಬಂಧಿಸಿದ್ದಾರೆ.

ದಾವಣಗೆರೆ ಪರಪ್ಪನಹಳ್ಳಿ ಮೂಲದ ರಾಮ್ ನಾಯ್ಕ್ ಯಾನೆ ರಮೇಶ್ (31) ಬಂಧಿತ ಆರೋಪಿ. ಲಿಂಗನಾಯಕನಹಳ್ಳಿ ನಿವಾಸಿ ಕೂಲಿ ಕಾರ್ಮಿಕ ರಮೇಶ್ (38) ಕೊಲೆಯಾದವರು.
ಶುಕ್ರವಾರ ಸಂಜೆ ರಮೇಶ್ ಹಾಗೂ ರಾಮ್ ನಾಯ್ಕ್ ಇಬ್ಬರೂ ಅಂಗಡಿಪದವಿನ ಬಾಡಿಗೆ ಮನೆಯಲ್ಲಿ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಹಣದ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ವಾಗ್ವಾದದ ನಡುವೆ ರಾಮ್ ನಾಯ್ಕ್ ಚೂರಿಯಿಂದ ಇರಿದು ರಮೇಶ್‌ನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿ ಮಂಗಳೂರಿನ ಪಡೀಲ್‌ಗೆ ತೆರಳಿದ್ದ. ಅಲ್ಲಿಂದ ತನ್ನ ಊರಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ರಮೇಶ್ ಹಾಗೂ ರಾಮ್ ನಾಯ್ಕ್ ಸ್ನೇಹಿತರಾಗಿದ್ದರು ಎನ್ನಲಾಗಿದೆ. ಘಟನೆ ಬಳಿಕ ಮನೆಯ ಮತ್ತೊಬ್ಬ ನಿವಾಸಿ ಕೃಷ್ಣಪ್ಪ ಅಲ್ಲಿಗೆ ಬಂದಾಗ ಅಡುಗೆಮನೆಯಲ್ಲಿ ರಮೇಶ್ ಕೊಲೆಯಾದ ಸ್ಥಿತಿಯಲ್ಲಿ ಇರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸ್ ಇನ್ಸ್‌ಪೆಕ್ಟರ್ ಎಂ.ವಿ. ವಿಷ್ಣು ಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಎಸ್‌ಐಗಳಾದ ಶಬರೀಕೃಷ್ಣನ್ ಹಾಗೂ ಅರ್ಜುನ್, ಸ್ಕ್ವಾಡ್ ಸದಸ್ಯರಾದ ಸುಧಾಕರನ್, ಸಜಿತ್, ರಾಜೇಶ್ ಮತ್ತು ಜಿನೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.



