ಕಾಸರಗೋಡು: ಅಂಗನವಾಡಿ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಧ್ವಜಸ್ತಂಭಕ್ಕೆ ಕಟ್ಟಲಾಗಿದ್ದ ಹಗ್ಗ ಆಕಸ್ಮಿಕವಾಗಿ ಕುತ್ತಿಗೆಗೆ ಸಿಲುಕಿಕೊಂಡ ಪರಿಣಾಮ 11 ವರ್ಷದ ಬಾಲಕ ಮೃತಪಟ್ಟಿರುವ ದಾರುಣ ಘಟನೆ ಕಾಸರಗೋಡಿನ ಮಡಿಕೈ ಸಮೀಪದ ಕಂಜಿಪೊಯಿಲ್ನಲ್ಲಿ ಗುರುವಾರ ಸಂಜೆ ನಡೆದಿದೆ.

ಮೃತ ಬಾಲಕನನ್ನು ರಾಜೇಶ್ ಹಾಗೂ ನೀತು ದಂಪತಿಯ ಪುತ್ರ ಅನೇಕ್ ಎಂದು ಗುರುತಿಸಲಾಗಿದೆ. ಕಂಜಿಪೊಯಿಲ್ನ ಶಾಲೆಯೊಂದರಲ್ಲಿ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಅನೇಕ್, ನಂದನಕುಳಿ ಅಂಗನವಾಡಿ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಗುರುವಾರ ಸಂಜೆ ಸುಮಾರು 5 ಗಂಟೆ ವೇಳೆಗೆ ಅಂಗನವಾಡಿ ಮುಂಭಾಗದಲ್ಲಿ ಆಟವಾಡುತ್ತಿದ್ದ ಅನೇಕ್ನ ಕುತ್ತಿಗೆಗೆ ಧ್ವಜಸ್ತಂಭಕ್ಕೆ ಕಟ್ಟಲಾಗಿದ್ದ ಹಗ್ಗ ಸಿಲುಕಿಕೊಂಡು ಬಿಗಿಯಾಗಿದೆ ಎನ್ನಲಾಗಿದೆ. ಇದೇ ವೇಳೆ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಆಟೋರಿಕ್ಷಾ ಚಾಲಕರೊಬ್ಬರು ಬಾಲಕನನ್ನು ಗಮನಿಸಿ ತಕ್ಷಣ ಹಗ್ಗದಿಂದ ಬಿಡಿಸಿದ್ದಾರೆ.
ಬಳಿಕ ಬಾಲಕನನ್ನು ಕೂಡಲೇ ಕಾಞಂಗಾಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮುನ್ನವೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಆಟವಾಡುವ ವೇಳೆ ಆಕಸ್ಮಿಕವಾಗಿ ಹಗ್ಗ ಕುತ್ತಿಗೆಗೆ ಸಿಲುಕಿಕೊಂಡು ಬಿಗಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.



