ಬಂಟ್ವಾಳ: ಭಂಡಾರಿಬೆಟ್ಟು ರಾಷ್ಟ್ರೀಯ ಹೆದ್ದಾರಿ ಸಮೀಪದ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 75ನೇ ವರ್ಷದ ಮೊಸರುಕುಡಿಕೆ ಉತ್ಸವ ಸೆ.4ರಿಂದ 6ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಲಿದೆ.

ಶ್ರೀಕೃಷ್ಣ ಭಜನಾ ಮಂದಿರ ಸೇವಾ ಟ್ರಸ್ಟ್, ಮೊಸರುಕುಡಿಕೆ ಉತ್ಸವ ಸಮಿತಿ ಹಾಗೂ ಮಾತೃ ಬಳಗದ ವತಿಯಿಂದ ಉತ್ಸವಕ್ಕೆ ಭರದ ಸಿದ್ಧತೆ ನಡೆಸಲಾಗಿದೆ.
ಸೆ.4ರಂದು ಬೆಳಗ್ಗೆ 7.30ರಿಂದ ಗಣಹೋಮ ಸಹಿತ ಭಜನೆ ಆರಂಭವಾಗಲಿದ್ದು, ರಾತ್ರಿ 12 ಗಂಟೆಗೆ ಮಂಗಳಾರತಿ ಹಾಗೂ ಮಹಾಪೂಜೆ ನಡೆಯಲಿದೆ.
ಸೆ.5ರಂದು ಬೆಳಗ್ಗೆ 9.30ಕ್ಕೆ ಶ್ರೀಕೃಷ್ಣ ಭಾವಚಿತ್ರವನ್ನು ಮಂಟಪದಲ್ಲಿರಿಸಿ ಶೋಭಾಯಾತ್ರೆ ನಡೆಯಲಿದೆ. ಸಂಜೆ 4ರಿಂದ ಪುಟಾಣಿಗಳ ಶ್ರೀಕೃಷ್ಣ ವೇಷ ಸ್ಪರ್ಧೆ ಹಾಗೂ ಹಿರಿಯರಿಗೆ ಮಲ್ಲಕಂಬ ಸ್ಪರ್ಧೆ ನಡೆಯಲಿದೆ. ಸಂಜೆ 6ಕ್ಕೆ ಸಭಾ ಕಾರ್ಯಕ್ರಮ ಮತ್ತು ರಾತ್ರಿ 7ಕ್ಕೆ ‘ಯಕ್ಷ ತೆಲಿಕೆ’ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.

ಸೆ.6ರಂದು ಬೆಳಗ್ಗೆ 9ರಿಂದ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು, ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಸಂಜೆ 6ಕ್ಕೆ ಸಭಾ ಕಾರ್ಯಕ್ರಮ ಹಾಗೂ ರಾತ್ರಿ 7.30ರಿಂದ ‘ಶಿವದೂತೆ ಗುಳಿಗೆ’ ನಾಟಕ ಪ್ರದರ್ಶನಗೊಳ್ಳಲಿದೆ.

ಕಳೆದ 30 ವರ್ಷಗಳ ಹಿಂದೆ ಭಜನಾ ಮಂದಿರ ನಿರ್ಮಾಣಗೊಂಡಿದ್ದು, ಇದೀಗ ರಸ್ತೆ ವಿಸ್ತರಣೆಯ ಹಿನ್ನೆಲೆಯಲ್ಲಿ ಪ್ರತ್ಯೇಕ ಮಂದಿರ ನಿರ್ಮಿಸಲು 10 ಸೆಂಟ್ಸ್ ಜಮೀನು ಈಗಾಗಲೇ ಖರೀದಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ನಾರಾಯಣ ಮೂಲ್ಯ ತಿಳಿಸಿದ್ದಾರೆ.



