ಬಂಟ್ವಾಳ: ನರಿಕೊಂಬು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ 14 ಹಾಗೂ 17 ವಯೋಮಿತಿಯ ಬಾಲಕ ಮತ್ತು ಬಾಲಕಿಯರ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ ಗುರುವಾರ ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಬಂಟ್ವಾಳ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಯೋಗ ಕೇವಲ ಶಾರೀರಿಕ ವ್ಯಾಯಾಮವಲ್ಲ. ಅದು ದೇಹ, ಮನಸ್ಸು ಮತ್ತು ಆತ್ಮವನ್ನು ಜೋಡಿಸುವ ಕ್ರಿಯೆಯಾಗಿದೆ ಎಂದು ಹೇಳಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಮೇಲೆ ಓದಿನ ಒತ್ತಡ ಹೆಚ್ಚಾಗಿದೆ. ಪ್ರತಿದಿನ ಬೆಳಿಗ್ಗೆ 15ರಿಂದ 20 ನಿಮಿಷ ಯೋಗಾಸನ ಹಾಗೂ ಪ್ರಾಣಾಯಾಮ ಮಾಡುವುದರಿಂದ ಏಕಾಗ್ರತೆ ಮತ್ತು ನೆನಪಿನ ಶಕ್ತಿ ವೃದ್ಧಿಯಾಗುತ್ತದೆ. ಪ್ರಾಣಾಯಾಮ ಹಾಗೂ ಧ್ಯಾನದಿಂದ ಮನಸ್ಸು ಶಾಂತವಾಗಿರಲು ಸಹಕಾರಿಯಾಗುತ್ತದೆ ಎಂದು ಅವರು ತಿಳಿಸಿದರು.

ಅಂತರರಾಷ್ಟ್ರೀಯ ಯೋಗ ದಿನವನ್ನು ಜೂನ್ 21ರಂದು ವಿಶ್ವದಾದ್ಯಂತ ಆಚರಿಸುವ ಮೂಲಕ ಯೋಗದ ಮಹತ್ವವನ್ನು ಇಡೀ ಜಗತ್ತು ಒಪ್ಪಿಕೊಂಡಿದೆ. ವಿದ್ಯಾರ್ಥಿಗಳು ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳಬೇಕು ಎಂದು ಆಶಾ ನಾಯಕ್ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ ಅಂಚನ್ ವಹಿಸಿದ್ದರು. ನಿವೃತ್ತ ಶಿಕ್ಷಕಿ ದೇವಕಿ ದೇಜಪ್ಪ ಕೋಡಿ ಕಾರ್ಯಕ್ರಮ ಉದ್ಘಾಟಿಸಿದರು.

ವೇದಿಕೆಯಲ್ಲಿ ಶಿಕ್ಷಣ ಸಂಯೋಜಕಿ ಸುಧಾ, ಪ್ರಭಾರ ಸಮನ್ವಯಾಧಿಕಾರಿ ವಿದ್ಯಾ, ಬಂಟ್ವಾಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗ್ರೇಡ್–1 ಅಧ್ಯಕ್ಷ ಶಿವಪ್ರಸಾದ್ ರೈ, ಗ್ರೇಡ್–2 ಅಧ್ಯಕ್ಷ ಇಂದುಶೇಖರ್, ಸಮೂಹ ಸಂಪನ್ಮೂಲ ವ್ಯಕ್ತಿ ಪುಷ್ಪ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷೆ ಲಕ್ಷ್ಮಿ ಪ್ರಕಾಶ್, ಕಲ್ಲಡ್ಕ ವಲಯ ಕ್ರೀಡಾಕೂಟಗಳ ನೋಡಲ್ ಜಗದೀಶ್, ನಿವೃತ್ತ ಸಿಆರ್‌ಪಿ ಸತೀಶ್ ರಾವ್, ನರಿಕೊಂಬು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಶೋಭಾ ಹಾಗೂ ಶಾಲಾ ನಾಯಕ ಹಿತೇಶ್ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಜ್ಯೋತಿ ಕೆ. ಸ್ವಾಗತಿಸಿದರು. ಶಿಕ್ಷಕಿ ದಿವ್ಯಶ್ರೀ ವಂದಿಸಿದರು. ಶಿಕ್ಷಕಿ ವಿಲ್ಮಾ ಪ್ರಸಿಲ್ಲ ಪಿಂಟೋ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಶಿಕ್ಷಕಿಯರು ಕಾರ್ಯಕ್ರಮಕ್ಕೆ ಸಹಕರಿಸಿದರು.





