Breaking
3 Sep 2026, Thu

ಆದಿವಾಸಿಗಳ ಬೇಡಿಕೆ ಈಡೇರಿಕೆಗೆ ಆಗ್ರಹ; ಸೆ.18ರ ಸಚಿವ ಸಂಪುಟ ಸಭೆಯಲ್ಲಿ ಐತಿಹಾಸಿಕ ತೀರ್ಮಾನಕ್ಕೆ ಮನವಿ

ಬೆಳ್ತಂಗಡಿ: ಆದಿವಾಸಿ ಸಮುದಾಯಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಗೆ ಮನವಿ ಸಲ್ಲಿಸಲಾಯಿತು.

ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ಬುಧವಾರ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ನೇತೃತ್ವದಲ್ಲಿ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿತು. ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಆದಿವಾಸಿ ಸಮುದಾಯಗಳ ಪ್ರಮುಖ ಸಮಸ್ಯೆಗಳ ಕುರಿತು ಐತಿಹಾಸಿಕ ತೀರ್ಮಾನ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಾಸಿಸುವ ಮಲೆಕುಡಿಯ ಸಮುದಾಯಕ್ಕೆ ರಸ್ತೆ, ವಿದ್ಯುತ್ ಸೇರಿದಂತೆ ಮೂಲಸೌಕರ್ಯ ಕಲ್ಪಿಸಬೇಕು. ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು. ವಿವಿಧ ಯೋಜನೆಗಳ ಹೆಸರಿನಲ್ಲಿ ಆದಿವಾಸಿಗಳಿಗೆ ಮೂಲಸೌಕರ್ಯ ನಿರಾಕರಿಸುವುದು ಹಾಗೂ ಒಕ್ಕಲೆಬ್ಬಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಲಾಗಿದೆ.

ಮಲೆಕುಡಿಯ, ಕೊರಗ ಹಾಗೂ ಮರಾಠಿ ನಾಯ್ಕ ಸಮುದಾಯಗಳಿಗೂ ಪೌಷ್ಟಿಕ ಆಹಾರ ಒದಗಿಸುವುದು, ತಾಲೂಕಿನ ಆದಿವಾಸಿ ಗುಡಿಸಲುಗಳ ಸಮೀಕ್ಷೆ ನಡೆಸಿ ಸುಸಜ್ಜಿತ ಮನೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದು, ಹಲವು ವರ್ಷಗಳಿಂದ ಸರ್ಕಾರಿ ಹಾಗೂ ಅರಣ್ಯ ಪರಂಬೋಕು ಜಮೀನಿನಲ್ಲಿ ಕೃಷಿ ಮಾಡಿಕೊಂಡು ವಾಸಿಸುತ್ತಿರುವ ಆದಿವಾಸಿಗಳ ಜಮೀನನ್ನು ಅಕ್ರಮ-ಸಕ್ರಮ ಯೋಜನೆಯಡಿ ಮಂಜೂರು ಮಾಡುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಡಲಾಗಿದೆ.

ಅಲ್ಲದೆ, ಬಾಂಜಾರು ಮಲೆಕುಡಿಯ ಕಾಲೋನಿಗೆ ಪರ್ಯಾಯ ರಸ್ತೆ ಸಂಪರ್ಕ ಕಲ್ಪಿಸುವುದು, ವಾಲ್ಮೀಕಿ ಆಶ್ರಮ ವಸತಿ ಶಾಲೆಗಳ ಅಧ್ಯಾಪಕರು ಹಾಗೂ ಇತರೆ ಸಿಬ್ಬಂದಿಯನ್ನು ಖಾಯಂಗೊಳಿಸುವುದು ಮತ್ತು ಕಾಡುತ್ಪತ್ತಿ ಸಂಗ್ರಹಿಸಲು ಆದಿವಾಸಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ, ಸಂಚಾಲಕ ಶೇಖರ್ ಲಾಯಿಲ, ಮುಖಂಡರಾದ ಸುಧಾಕರ ಕುತ್ಲೂರು, ಪ್ರಶಾಂತ್ ಕುತ್ಲೂರು, ಸಂತೋಷ್ ಕಲ್ಲಂಡ ನಾವರ, ವಸಂತ ಹಿತ್ತಿಲಪೇಲ, ನಾಗೇಶ್ ಸವಣಾಲು, ಶೇಖರ ಕಂಬುಜೆ ನಡ, ಲೋಕೇಶ್ ಕುದ್ಕೊಲಿ ನಡ, ವಸಂತ ಕಂಬುಜೆ ನಡ, ನವೀನ್ ಪುಲಿತ್ತಡಿ ನಾವೂರು ಹಾಗೂ ನಿರಂಜನ್ ಆಯಿಲ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *