ಬೆಂಗಳೂರು: ವೃದ್ಧೆಯರನ್ನು ಗುರಿಯಾಗಿಸಿಕೊಂಡು ಸರ ಅಪಹರಣ ಮಾಡುತ್ತಿದ್ದ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಜೆ.ಪಿ.ನಗರ 7ನೇ ಹಂತದ ನಿವಾಸಿ ಸಂತೋಷ್ (32) ಬಂಧಿತ ಆರೋಪಿ.

ಬಂಧಿತನಿಂದ ಸುಮಾರು 2.5 ಲಕ್ಷ ರೂ. ಮೌಲ್ಯದ ಚಿನ್ನದ ಸರ, ಮೊಬೈಲ್ ಫೋನ್ ಹಾಗೂ ಅಪರಾಧ ಕೃತ್ಯಕ್ಕೆ ಬಳಸುತ್ತಿದ್ದ ಆಟೋವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಆರೋಪಿ ಆಟೋದಲ್ಲಿ ಸಂಚರಿಸುತ್ತಾ ರಸ್ತೆಬದಿ ಅಥವಾ ಮನೆಗಳ ಮುಂದೆ ನಿಂತಿದ್ದ ವೃದ್ಧೆಯರನ್ನು ಗುರುತಿಸಿ, ವಿಳಾಸ ಕೇಳುವ ನೆಪದಲ್ಲಿ ಅವರ ಬಳಿ ತೆರಳುತ್ತಿದ್ದ. ಬಳಿಕ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗುತ್ತಿದ್ದ ಎನ್ನಲಾಗಿದೆ.

ತನ್ನ ಆಟೋದ ನೋಂದಣಿ ಸಂಖ್ಯೆ ಯಾರಿಗೂ ತಿಳಿಯದಂತೆ ಮಾಡಲು ವಾಹನದ ನಂಬರ್ ಪ್ಲೇಟ್ಗೆ ಕಾಗದ ಅಂಟಿಸಿ ಸಂಚರಿಸುತ್ತಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಕಳೆದ ಆ.29ರಂದು ಬೆಳಗ್ಗೆ ಲಿಂಗಧೀರನಹಳ್ಳಿಯಲ್ಲಿ ಮನೆಯೊಂದರ ಮುಂದೆ ನಿಂತಿದ್ದ ವೃದ್ಧೆಯೊಬ್ಬರ ಬಳಿ ವಿಳಾಸ ಕೇಳುವ ನೆಪದಲ್ಲಿ ತೆರಳಿದ ಆರೋಪಿ, ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.


