Breaking
2 Sep 2026, Wed

ಬಜ್ಪೆ: ಕರಂಬಾರು ಬಳಿ ಕಿರುಸೇತುವೆ ಕುಸಿತ; ಮುನ್ನೆಚ್ಚರಿಕೆಯಿಂದ ಮಂಗಳೂರು-ಕಟೀಲು ರಸ್ತೆ ಸಂಚಾರ ಬಂದ್

ಬಜ್ಪೆ: ಮಂಗಳೂರು–ಕಟೀಲು ಮುಖ್ಯರಸ್ತೆಯ ಕರಂಬಾರು ಬಳಿ ಮಳೆನೀರು ಹರಿದುಹೋಗಲು ನಿರ್ಮಿಸಲಾಗಿದ್ದ ಕಿರುಸೇತುವೆಯ ಒಂದು ಭಾಗ ಕುಸಿದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಈ ಮಾರ್ಗದ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಕಟೀಲು ಕಡೆಯಿಂದ ಮಂಗಳೂರು ಕಡೆಗೆ ತೆರಳುವ ರಸ್ತೆಯಲ್ಲಿರುವ ಕಿರುಸೇತುವೆಯ ಅಡಿಭಾಗ ಕುಸಿದಿರುವುದನ್ನು ಮಂಗಳವಾರ ವಾಹನ ಸವಾರರು ಗಮನಿಸಿದ್ದಾರೆ. ಬಳಿಕ ಸಾರ್ವಜನಿಕರು ಸಂಬಂಧಪಟ್ಟ ಇಲಾಖೆ ಹಾಗೂ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಬಜ್ಪೆ ಠಾಣೆ ಪೊಲೀಸರು, ಸ್ಥಳೀಯರ ಸಹಕಾರದೊಂದಿಗೆ ಅಪಾಯಕಾರಿ ಪ್ರದೇಶಕ್ಕೆ ಬ್ಯಾರಿಕೇಡ್ ಅಳವಡಿಸಿ ರಸ್ತೆ ಸಂಚಾರವನ್ನು ಬಂದ್ ಮಾಡಿದ್ದಾರೆ. ಅಲ್ಲದೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.

ಮುಖ್ಯರಸ್ತೆ ಬಂದ್ ಆಗಿರುವುದರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನ ಸವಾರರು ಹಾಗೂ ಕಟೀಲು ಸೇರಿದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಭಕ್ತಾದಿಗಳಿಗೆ ತೊಂದರೆಯಾಗಿದೆ. ಸದ್ಯ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಪರ್ಯಾಯ ರಸ್ತೆಯನ್ನು ಬಳಸುವಂತೆ ಸೂಚಿಸಲಾಗಿದೆ.

Leave a Reply

Your email address will not be published. Required fields are marked *