Breaking
1 Sep 2026, Tue

ಮಂಗಳೂರು: ಮೀನುಗಾರಿಕೆ ವೇಳೆ ಸಮುದ್ರಕ್ಕೆ ಬಿದ್ದು ಯುವಕ ನಾಪತ್ತೆ

ಮಂಗಳೂರು: ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ದೋಣಿಯಿಂದ ಸಮುದ್ರಕ್ಕೆ ಬಿದ್ದು ಆಂಧ್ರಪ್ರದೇಶ ಮೂಲದ 19 ವರ್ಷದ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ನಡೆದಿದೆ.

ನಾಪತ್ತೆಯಾದ ಯುವಕನನ್ನು ಭಕ್ತನಿ ಕಿಶೋರ್ (19) ಎಂದು ಗುರುತಿಸಲಾಗಿದೆ. ಸುಮಾರು ಒಂದು ತಿಂಗಳ ಹಿಂದೆ ಮೀನುಗಾರಿಕೆ ಕೆಲಸಕ್ಕೆ ಮಂಗಳೂರಿಗೆ ಬಂದಿದ್ದ ಕಿಶೋರ್, ಮೊಹಮ್ಮದ್ ಫೈಜಲ್ ಅವರ ಮಾಲೀಕತ್ವದ ದೋಣಿಯಲ್ಲಿ ಕೆಲಸ ಮಾಡುತ್ತಿದ್ದನು.

ಆ.23ರಂದು ಬೆಳಗಿನ ಜಾವ ಸುಮಾರು 3 ಗಂಟೆಗೆ 12 ಮಂದಿ ಮೀನುಗಾರರನ್ನು ಹೊತ್ತ ದೋಣಿ ಮಂಗಳೂರು ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರಕ್ಕೆ ತೆರಳಿತ್ತು. ಆ.25ರಂದು ಬೆಳಗ್ಗೆ ಸುಮಾರು 5 ಗಂಟೆಗೆ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಕಿಶೋರ್ ಹಗ್ಗದ ಸಹಾಯದಿಂದ ದೋಣಿಯ ಅಂಚಿನಲ್ಲಿ ಕುಳಿತಿದ್ದ ಎನ್ನಲಾಗಿದೆ.

ಈ ವೇಳೆ ಬಲವಾದ ಸಮುದ್ರದ ಅಲೆಯೊಂದು ಅಪ್ಪಳಿಸಿದ ಪರಿಣಾಮ ಆಯತಪ್ಪಿ ಕಿಶೋರ್ ಸಮುದ್ರಕ್ಕೆ ಬಿದ್ದಿದ್ದಾನೆ. ಕೂಡಲೇ ದೋಣಿಯಲ್ಲಿದ್ದ ಮೀನುಗಾರರು ಹಾಗೂ ಸಮೀಪದಲ್ಲಿದ್ದ ಇತರ ಮೀನುಗಾರಿಕಾ ದೋಣಿಗಳ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.

ಬಳಿಕ ಸಮುದ್ರದಲ್ಲಿ ಬಲೆ ಬೀಸಿ ಕಿಶೋರ್‌ಗಾಗಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ ಎಂದು ಕಿಶೋರ್ ಅವರ ತಂದೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *