ಹಳೆಯಂಗಡಿಯ ಇಂದಿರಾನಗರ ರೈಲ್ವೇ ಗೇಟ್ ಬಳಿ ರೈಲು ಢಿಕ್ಕಿ ಹೊಡೆದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.

ಮೃತರನ್ನು ಒಡಿಶಾ ಮೂಲದ ಜಗ (40) ಎಂದು ಗುರುತಿಸಲಾಗಿದೆ. ಅವರು ತೋಕೂರು ಸಮೀಪದ ಪ್ಲೈವುಡ್ ಕಾರ್ಖಾನೆಯೊಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಜಗ ಅವರು ಹಳೆಯಂಗಡಿ ಪೇಟೆಯಿಂದ ಇಂದಿರಾನಗರದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ರೈಲು ಹಾದುಹೋಗುತ್ತಿದ್ದ ಸಂದರ್ಭದಲ್ಲೇ ರೈಲ್ವೇ ಹಳಿ ದಾಟಲು ಮುಂದಾಗಿದ್ದರು. ಈ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಎಚ್ಚರಿಕೆ ನೀಡಿದರೂ, ವೇಗವಾಗಿ ಬಂದ ರೈಲು ಅವರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಜಗ ಅವರೊಂದಿಗೆ ಇದ್ದ ಮತ್ತೋರ್ವ ಕಾರ್ಮಿಕ ಕೈಲಾಸ್ ಅವರು ಸ್ವಲ್ಪದರಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದ ಕೆಲಕಾಲ ಇಂದಿರಾನಗರ ರೈಲ್ವೇ ಗೇಟ್ ಬಳಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮೂಲ್ಕಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಿದರು.

ಮೃತದೇಹವನ್ನು ಮುಂದಿನ ಕಾನೂನು ಪ್ರಕ್ರಿಯೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಮೂಲ್ಕಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


