Breaking
31 Aug 2026, Mon

ಯುವವಾಹಿನಿ ಪಡುಬಿದ್ರಿ ಘಟಕದ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ; ಪಿ.ಕೆ. ಜಯರಾಮ್ ಪ್ರವರ್ತಿತ ವಿದ್ಯಾನಿಧಿ ವಿತರಣೆ

ಪಡುಬಿದ್ರಿ: ಯುವವಾಹಿನಿ (ರಿ.) ಪಡುಬಿದ್ರಿ ಘಟಕದ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭ ಹಾಗೂ ಪಿ.ಕೆ. ಜಯರಾಮ್ ಪ್ರವರ್ತಿತ ವಿದ್ಯಾನಿಧಿ ವಿತರಣೆ ಕಾರ್ಯಕ್ರಮ ಭಾನುವಾರ ಪಡುಬಿದ್ರಿಯ ಸಹಕಾರ ಸಂಗಮ ಸಿ.ಎ. ಸೊಸೈಟಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬ್ರಿಟನ್ ಬಿಲ್ಲವ ಬಳಗದ ಮುಖ್ಯಸ್ಥ ಹಾಗೂ ಅನಿವಾಸಿ ಭಾರತೀಯ ವೈದ್ಯ ಡಾ. ಪಿ.ಕೆ. ಮನೋಜ್ ಪೂಜಾರಿ, “ಯುವಜನತೆಯೇ ದೇಶದ ನಿಜವಾದ ಸಂಪತ್ತು. ಸಮಾಜದ ಶ್ರೇಯೋಭಿವೃದ್ಧಿ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಯುವವಾಹಿನಿಯ ಸೇವೆ ಶ್ಲಾಘನೀಯ. ಯುವಶಕ್ತಿ ಸದಾ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಹೇಳಿದರು.

ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅವರು ನೂತನ ಅಧ್ಯಕ್ಷ ನಿಖಿಲ್ ಪೂಜಾರಿ ಹಾಗೂ ಕಾರ್ಯಕಾರಿ ಸಮಿತಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಬಳಿಕ ನಿರ್ಗಮಿತ ಅಧ್ಯಕ್ಷ ವಿಧಿತ್ ಕುಮಾರ್ ಕರ್ನಿರೆ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಯುವ ಉದ್ಯಮಿ ಗಣೇಶ್ ಗುಜರನ್, ಮಂಗಳೂರಿನ ಎ.ಜೆ. ವೈದ್ಯಕೀಯ ಮಹಾವಿದ್ಯಾಲಯದ ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ. ಪಿ.ಕೆ. ಕಿರಣ್ ಕುಮಾರ್, ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಮಮತಾ ರಾಜ್ ಉಪಸ್ಥಿತರಿದ್ದರು.

ವಿದ್ಯಾನಿಧಿ ವಿತರಣೆ, ಪ್ರತಿಭಾ ಪುರಸ್ಕಾರ

ಸಮಾಜದ ಆರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗುವ ‘ಪಿ.ಕೆ. ಜಯರಾಮ್ ಪ್ರವರ್ತಿತ ವಿದ್ಯಾನಿಧಿ’ ಯನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಯುವವಾಹಿನಿ ಸದಸ್ಯರ ಕುಟುಂಬಗಳ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ನೀಡಿ ಗೌರವಿಸಲಾಯಿತು.

ಗಣ್ಯರಿಗೆ ಸನ್ಮಾನ

ಸಮಾಜ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಡಾ. ಪಿ.ಕೆ. ಮನೋಜ್ ಪೂಜಾರಿ ಮತ್ತು ಡಾ. ಬೃಂದಾ ಮನೋಜ್ ದಂಪತಿಯನ್ನು ಸನ್ಮಾನಿಸಲಾಯಿತು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅವರನ್ನು ಘಟಕದ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು.

ಕಳೆದ ಸಾಲಿನಲ್ಲಿ ಘಟಕವನ್ನು ಮುನ್ನಡೆಸಿದ ನಿರ್ಗಮಿತ ಅಧ್ಯಕ್ಷ ವಿಧಿತ್ ಪೂಜಾರಿ, ಘಟಕದ ಮಾಜಿ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಕೃತಜ್ಞತಾಪೂರ್ವಕವಾಗಿ ಸನ್ಮಾನಿಸಲಾಯಿತು.

ಶ್ರೀಮತಿ ಸುಗಂಧಿ ಶ್ಯಾಮ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಿರ್ಗಮಿತ ಅಧ್ಯಕ್ಷ ವಿಧಿತ್ ಕುಮಾರ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಸುಜಿತ್ ಕುಮಾರ್ ಪ್ರಸ್ತಾವನೆಗೈದರು. ನಿರ್ಗಮಿತ ಕಾರ್ಯದರ್ಶಿ ಭಾಸ್ಕರ್ ಎನ್. ಅಂಚನ್ ವಾರ್ಷಿಕ ವರದಿ ಮಂಡಿಸಿದರು. ನೂತನ ಕಾರ್ಯದರ್ಶಿ ರಾಜೇಶ್ವರಿ ಅವಿನಾಶ್ ಧನ್ಯವಾದ ಸಮರ್ಪಿಸಿದರು.

ಶ್ರೀಮತಿ ಚೈತ್ರ ಗಣೇಶ್, ಶ್ರೀಮತಿ ಚೈತ್ರ ಮನೋಹರ್ ಹಾಗೂ ಶ್ರೀ ಹರೀಶ್ ಕೋಟ್ಯಾನ್ ಉಳ್ಳೂರು ಕಾರ್ಯಕ್ರಮ ನಿರ್ವಹಿಸಿದರು. ಘಟಕದ ಸದಸ್ಯರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *