ಬಂಟ್ವಾಳ: ಬ್ರಹ್ಮಶ್ರೀ ನಾರಾಯಣಗುರುಗಳ 172ನೇ ಜನ್ಮದಿನಾಚರಣೆಯ ಅಂಗವಾಗಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ, ಗಾಣದಪಡ್ಡು ಇದರ ಆಶ್ರಯದಲ್ಲಿ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ ವಿವಿಧ ಕಾರ್ಯಕ್ರಮಗಳು ಸಂಭ್ರಮದಿಂದ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಸುಭಾಷ್ ನಗರ, ಸಜೀಪಮೂಡದ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯಿಂದ ಭಜನೆ, ಗುರುಪೂಜೆ ಹಾಗೂ ಮಹಾಪೂಜೆ ನೆರವೇರಿಸಲಾಯಿತು. ಬಳಿಕ ಬಿ.ಸಿ.ರೋಡಿನಲ್ಲಿ ನೂತನವಾಗಿ ನಿರ್ಮಿಸಲಾದ ಬ್ರಹ್ಮಶ್ರೀ ನಾರಾಯಣಗುರು ವೃತ್ತವನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ, ಶಾಸಕ ರಾಜೇಶ್ ನಾಯಕ್, ಮಾಜಿ ಸಚಿವ ಬಿ. ರಮಾನಾಥ ರೈ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಕೆ.ಬಿ. ತೀರ್ಥಪ್ರಸಾದ್, ಮಾಜಿ ಶಾಸಕರಾದ ರುಕ್ಷ್ಮಯ ಪೂಜಾರಿ ಹಾಗೂ ಪದ್ಮನಾಭ ಕೊಟ್ಟಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮೌನ ಕ್ರಾಂತಿಯ ಮೂಲಕ ಸಮಾಜಕ್ಕೆ ಹೊಸ ದಾರಿಯನ್ನು ತೋರಿಸಿದ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ, ಸಂದೇಶ ಹಾಗೂ ಆದರ್ಶಗಳನ್ನು ಇಂದಿನ ಸಮಾಜ ಪಾಲಿಸುವ ಅಗತ್ಯವಿದೆ ಎಂದು ಹೇಳಿದರು.

ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ನಾರಾಯಣಗುರುಗಳು ಕೇವಲ ದಾರ್ಶನಿಕರಲ್ಲ, ಪೂಜನೀಯ ಮಹಾತ್ಮರೂ ಆಗಿದ್ದಾರೆ. ಅವರ ಚಿಂತನೆ ಮತ್ತು ಸಾಮಾಜಿಕ ಸುಧಾರಣಾ ಕಾರ್ಯಗಳನ್ನು ಮಹಾತ್ಮ ಗಾಂಧೀಜಿ, ಪೋಪ್ ಸೇರಿದಂತೆ ವಿಶ್ವದ ಹಲವು ಗಣ್ಯರು ಗುರುತಿಸಿದ್ದಾರೆ. ಹಿಂದುಳಿದ ವರ್ಗದ ಜನರಿಗೆ ಸ್ವಾಭಿಮಾನದಿಂದ ಬದುಕುವ ಅವಕಾಶ ಕಲ್ಪಿಸುವಲ್ಲಿ ನಾರಾಯಣಗುರುಗಳ ಕೊಡುಗೆ ಮಹತ್ವದ್ದಾಗಿದೆ ಎಂದರು.

ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಇಂಜಿನಿಯರ್ ಸುಜಯ್ ಲೋಬೊ ಅವರನ್ನು ಸನ್ಮಾನಿಸಲಾಯಿತು.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ, ವಿದ್ಯಾರ್ಥಿವೇತನ ಪಡೆದ ವಿದ್ಯಾರ್ಥಿಗಳು ವಿದ್ಯೆಯ ಮಹತ್ವವನ್ನು ಅರಿತುಕೊಂಡು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಮಾದರಿಯಾಗುವ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮೆಲ್ಕಾರ್, ಜೊತೆ ಕಾರ್ಯದರ್ಶಿ ಆನಂದ ಸಾಲಿಯಾನ್ ಶಂಭೂರು, ಕೋಶಾಧಿಕಾರಿ ಸುನೀಲ್ ಎಸ್. ಕುಂದರ್ ಮೊಡಂಕಾಪು, ಲೆಕ್ಕಪರಿಶೋಧಕ ಪ್ರಶಾಂತ್ ಕೋಟ್ಯಾನ್ ಸಂಚಯಗಿರಿ, ತಾಲೂಕು ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ರಾಗಿಣಿ ಮಾಧವ, ಯುವವಾಹಿನಿ ಅಧ್ಯಕ್ಷ ಕಿರಣ್ ಪೂಂಜರಕೋಡಿ, ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಇದೇ ವೇಳೆ, ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆಗೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಜೀಪಮೂಡದ ಜ್ಞಾನಮಂದಿರದಲ್ಲಿ ಮನವಿ ಸಲ್ಲಿಸಿದ್ದನ್ನು ಸ್ಮರಿಸಲಾಯಿತು. ಅಲ್ಲದೆ, ಶಿವಗಿರಿ ಮಠದ ಶಾಖಾ ಮಠವೊಂದನ್ನು ಬಂಟ್ವಾಳ ತಾಲೂಕಿನ ನಾವೂರಿನಲ್ಲಿ ಸ್ಥಾಪಿಸುವ ಯೋಜನೆಯೂ ಇದೆ ಎಂದು ತಿಳಿಸಲಾಯಿತು.

ನೂತನವಾಗಿ ನಿರ್ಮಿಸಲಾದ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಅದ್ದೂರಿ ಉದ್ಘಾಟನೆಗೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಗಣ್ಯರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮ ಗಮನ ಸೆಳೆಯಿತು.





