ಮಂಗಳೂರು: ಹಲವು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರು ಪ್ರತ್ಯೇಕ ಪ್ರಕರಣಗಳ ವಾರೆಂಟ್ ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ 2006ರಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಮಾರು 8 ವರ್ಷಗಳಿಂದ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದ ಮುವಾಚ್ (45) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲದ ಮುಕ್ಕಚೇರಿ ಮೂಲದ ಮುವಾಚ್, ಪ್ರಸ್ತುತ ಕೇರಳದ ಕಣ್ಣೂರು ಜಿಲ್ಲೆಯ ಇರಿಕ್ಕೂರು ಪೆರುವಳತ್ ಪರಂಬುವಿನಲ್ಲಿ ವಾಸಿಸುತ್ತಿದ್ದ. ಆಗಸ್ಟ್ 28ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಇದೇ ವೇಳೆ ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2012ರಲ್ಲಿ ದಾಖಲಾಗಿದ್ದ ದರೋಡೆ ಪ್ರಕರಣದ ಆರೋಪಿಯಾಗಿದ್ದ ಶ್ರೀನಿವಾಸ್ ಕೆ. ಅಲಿಯಾಸ್ ಶೀನಪ್ಪ ಅಲಿಯಾಸ್ ಶೀನ (43) ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ. ಸುಮಾರು 13 ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಗೈರುಹಾಜರಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಜಯನಗರ ಜಿಲ್ಲೆಯ ಹರಪನಳ್ಳಿ ಕೊರಚರಟ್ಟಿ ಪ್ರದೇಶದಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ.

ವೇಣೂರು ಠಾಣೆಯ ಎಎಸ್ಐ ಬೆನ್ನಿಚನ್, ಹೆಚ್ಸಿ ಕೃಷ್ಣ, ಸಿಪಿಸಿ ಬಸವರಾಜ್ ಎಸ್.ಪಿ. ಹಾಗೂ ಸಿಪಿಸಿ ಮೋಹನ್ ಕುಮಾರ್ ಅವರನ್ನೊಳಗೊಂಡ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿತ್ತು. ಬಂಧಿತ ಶ್ರೀನಿವಾಸ್ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.

