Breaking
13 Oct 2026, Tue

ಮೊಬೈಲ್ ವಿಚಾರಕ್ಕೆ ಕೊಲೆ: ಆರೋಪಿ ಧರ್ಮರಾಜ್ ಸುವರ್ಣಗೆ ಜೀವಾವಧಿ ಶಿಕ್ಷೆ

ಮಂಗಳೂರು: ಮೊಬೈಲ್ ವಾಪಸ್ ನೀಡದೆ ಹಾಳು ಮಾಡಿದ್ದಾನೆ ಎಂಬ ದ್ವೇಷದಿಂದ ವ್ಯಕ್ತಿಯೊಬ್ಬರನ್ನು ಮರದ ಸೊಂಟೆಯಿಂದ ಹೊಡೆದು ಕೊಲೆಗೈದ ಪ್ರಕರಣದಲ್ಲಿ ಅಪರಾಧಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ₹15,000 ದಂಡ ವಿಧಿಸಿ ತೀರ್ಪು ನೀಡಿದೆ.

ತೋಟ ಬೆಂಗ್ರೆಯ ನಿವಾಸಿ ಧರ್ಮರಾಜ್ ಸುವರ್ಣ (50) ಶಿಕ್ಷೆಗೊಳಗಾದ ಅಪರಾಧಿ. ಬಾಗಲಕೋಟೆ ಮೂಲದ ಮುತ್ತು ಬಸವರಾಜ ವಡ್ಡರ್ ಅಲಿಯಾಸ್ ಮುದುಕಪ್ಪ (39) ಕೊಲೆಯಾದವರು.

2024ರ ಸೆಪ್ಟೆಂಬರ್ 21ರಂದು ಬೆಳಿಗ್ಗೆ ಸುಮಾರು 10 ಗಂಟೆಗೆ ತೋಟ ಬೆಂಗ್ರೆಯ ಬೊಬ್ಬರ್ಯ ದೈವಸ್ಥಾನದ ಹಿಂಭಾಗದ ಸಮುದ್ರ ಕಿನಾರೆ ಬಳಿ ಧರ್ಮರಾಜ್ ಸುವರ್ಣ, ಮುತ್ತು ಬಸವರಾಜ ವಡ್ಡರ್ ಅವರನ್ನು ಮರದ ಸೊಂಟೆಯಿಂದ ಹೊಡೆದು ಕೊಲೆಗೈದಿದ್ದ. ಬಳಿಕ ಆತ ತಲೆಮರೆಸಿಕೊಂಡಿದ್ದ.

ಪ್ರಕರಣದ ತನಿಖೆ ನಡೆಸಿದ ಪಣಂಬೂರು ಪೊಲೀಸರು ಸೆಪ್ಟೆಂಬರ್ 26ರಂದು ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಚೊಂಪಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಧರ್ಮರಾಜ್ ಸುವರ್ಣನನ್ನು ಬಂಧಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಗದೀಶ್ ಅವರು ಅಕ್ಟೋಬರ್ 12ರಂದು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹15,000 ದಂಡ ವಿಧಿಸಿ ತೀರ್ಪು ಪ್ರಕಟಿಸಿದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *